ಕಲಬುರಗಿ | ತಾಯಿ, ಮಗುವಿನ ಆರೋಗ್ಯ ರಕ್ಷಣೆಗೆ ಕಿಲ್ಕಾರಿ ಸೇವೆ ಆರಂಭ
ಕಲಬುರಗಿ : ತಾಯಿ ಮತ್ತು ಶಿಶು ಮರಣದ ದರ ಕಡಿಮೆ ಮಾಡಲು ಹಾಗೂ ಗರ್ಭಿಣಿ ತಾಯಂದಿರಿಗೆ ಗುಣಮಟ್ಟದ ಆರೈಕೆ ಮಾಹಿತಿ ಒದಗಿಸಲು ಕೇಂದ್ರ ಸರ್ಕಾರವು ಕಿಲ್ಕಾರಿ ಸೇವೆ ಆರಂಭಿಸಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ತಾಯಿ ಮತ್ತು ಶಿಶು ಮರಣದ ದರ ಕಡಿಮೆ ಮಾಡುವುದು ಹಾಗೂ ಗರ್ಭಿಣಿ ತಾಯಂದಿರಿಗೆ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಒಂದು ವರ್ಷದೊಳಗಿನ ಮಕ್ಕಳಿಗೆ ಲಸಿಕಾಕರಣದ ಕುರಿತು ಮಾಹಿತಿಯನ್ನು ದೂರವಾಣಿ ಮೂಲಕ ನೇರವಾಗಿ ಕುಟುಂಬಗಳಿಗೆ ತಲುಪಿಸುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯೇ ಕಿಲ್ಕಾರಿ ಸೇವೆ.
ಕಿಲ್ಕಾರಿಯು ಭಾರತ ಸರ್ಕಾರವು ಗರ್ಭಿಣಿ, ಬಾಣಂತಿಯರಿಗೆ ತಂದಿರುವ ಉಚಿತ ಆರೋಗ್ಯ ಮಾಹಿತಿ ನೀಡುವ ಮೊಬೈಲ್ ಸೇವೆಯಾಗಿದ್ದು, ಈ ಉಚಿತ ಸೇವೆಯು ಗರ್ಭಧಾರಣೆಯ 4 ನೇ ತಿಂಗಳಿನಿಂದ, ಮಗುವಿನ ಮೊದಲ ಜನ್ಮದಿನದವರೆಗಿನ ಅವಧಿಯಲ್ಲಿ ತಾಯಿಯ ಆರೋಗ್ಯದ ಬಗ್ಗೆ ಹಾಗೂ ಮಕ್ಕಳಿಗೆ ನೀಡುವ ಲಸಿಕೆಗಳ ಬಗ್ಗೆ ಮಾಹಿತಿಯನ್ನು ಮುಂಚಿತವಾಗಿ ಕರೆಗಳ ಮೂಲಕ ತಿಳಿಸಲಾಗುತ್ತದೆ.
ಕಿಲ್ಕಾರಿ ನೋಂದಣಿ ಹೇಗೆ ಮಾಡಬೇಕು :
ಗರ್ಭಧಾರಣೆಯ ಅಥವಾ ಮಗುವಿನ ಜನನದ ವಿವರಗಳನ್ನು ಆಶಾ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ ಅಥವಾ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮೊಬೈಲ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕು. ನಂತರ ಈ ಮಾಹಿತಿಯನ್ನು ಆರ್.ಸಿ.ಹೆಚ್ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ) ಪೋರ್ಟಲ್‍ನಲ್ಲಿ ನಮೂದಿಸಲಾಗುತ್ತದೆ.
ಗರ್ಭಿಣಿಯರು ಪಾಲಿಸಬೇಕಾದ ಅಂಶಗಳು ಇಂತಿವೆ :
ಆರೋಗ್ಯ ಇಲಾಖೆಗೆ ತಾವು ಚಾಲ್ತಿಯಲ್ಲಿರುವ ಸೂಕ್ತ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ತಮ್ಮ ಮೊಬೈಲ್‍ನಲ್ಲಿ ಕಿಲ್ಕಾರಿ ಸಂಖ್ಯೆಯನ್ನು (0124-4451660) ಸೇವ್ ಮಾಡಬೇಕು. ಈ ಸಂಖ್ಯೆಯಿಂದ ಕರೆಗಳು ಬಂದಾಗ ಸ್ವೀಕರಿಸಬೇಕು.
ಅದೇ ರೀತಿ ಗರ್ಭಿಣಿಯರಿಗೆ ಹಾಗೂ ಮಗುವಿಗೆ 1 ವರ್ಷವಾಗುವರೆಗೆ ಪ್ರತಿವಾರಕ್ಕೊಮ್ಮೆ ಕಿಲ್ಕಾರಿ ಸಂಖ್ಯೆಯಿಂದ ಪ್ರಿ-ರಿಕಾರ್ಡೆಡ್ ಕರೆಗಳು ಬರುವುದು ಮುಂದುವರೆಯಲಿದ್ದು, ಒಂದು ವೇಳೆ ಕರೆ ಬಾರದಿದ್ದಲ್ಲಿ ಅಥವಾ ಮಾಹಿತಿಯನ್ನು ಮತ್ತೊಮ್ಮೆ ಕೇಳಲು ಬಯಸಿದ್ದಲ್ಲಿ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 14423 ಗೆ ಕರೆ ಮಾಡಬೇಕೆಂದು ಅವರು ತಿಳಿಸಿದ್ದಾರೆ.