ಕಲಬುರಗಿ | ವಿವಿಧ ಪಕ್ಷ ತೊರೆದು ಹಲವು ಯುವಕರು ಏ.6ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ : ಸತೀಶ ರೆಡ್ಡಿ ರಂಜೋಳ

ಕಲಬುರಗಿ : ಏ.6ರಂದು ಸೇಡಂ ತಾಲ್ಲೂಕಿನ ರಂಜೋಳ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಮೋಹನ್ ರೆಡ್ಡಿ ನೇತೃತ್ವದಲ್ಲಿ ಹಲವಾರು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಸೇಡಂ ತಾಲೂಕ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸತೀಶ ರೆಡ್ಡಿ ರಂಜೋಳ ಹೇಳಿದ್ದಾರೆ.
ಸೇಡಂ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಂಜೋಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸುತ್ತ ಮುತ್ತಲಿನ ಹಲವು ಗ್ರಾಮಗಳ ಯುವಕರು ಡಾ.ಶರಣಪ್ರಕಾಶ್ ಆರ್.ಪಾಟೀಲ್ ಉಡಗಿ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ, ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದರು.
ಮುಧೋಳ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅಂದು ಬೆಳಗ್ಗೆ ಸಚಿವ ಡಾ.ಶರಣಪ್ರಕಾಶ್ ಆರ್.ಪಾಟೀಲರಿಗೆ ಭವ್ಯ ಮೆರವಣಿಗೆ ಹಾಗೂ ಬೈಕ್ ರ್ಯಾಲಿ ನಡೆಯಲಿದ್ದು, ಸಂಜೆ 6 ಗಂಟೆ ರಂಜೋಳ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ , ಈ ಕಾರ್ಯಕ್ರಮದಲ್ಲಿ ಎಂಎಲ್ಸಿ ತಿಪ್ಪಣಪ್ಪ ಕಮಕನೂರ ಸೇರಿದಂತೆ ಜಿಲ್ಲಾ ಮಟ್ಟದ ನಾಯಕರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಹಲವು ಯುವ ಮುಖಂಡರು ವಿವಿಧ ಪಕ್ಷಗಳನ್ನು ತ್ಯಜಿಸಿ, ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಯುವಕರು ಹಾಗೂ ಅಭಿಮಾನಿಗಳು ಸೇರಿದಂತೆ ಮೂರು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಅಧ್ಯಕ್ಷ ರಂಜೋಳ ಕೃಷ್ಣ ರೆಡ್ಡಿ, ರಸೀದಿ ರಂಜೋಳ, ಸತ್ಯನಾರಾಯಣ ರೆಡ್ಡಿ ಭೂತಪೂರ, ಮೋಹನ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.