ಪಂಚಾಯತ್ ರಾಜ್ ವಿಕೇಂದ್ರೀಕರಣ ಸೂಚ್ಯಾಂಕದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು/ಕಲಬುರಗಿ : ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ವಿಕೇಂದ್ರಿಕರಣ ಸೂಚ್ಯಾಂಕದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿರುವುದು ರಾಜ್ಯದ ಪಂಚಾಯತ್ ರಾಜ್ ಇಲಾಖೆ ಸಂಭ್ರಮಪಡಲು ಹಾಗೂ ಆತ್ಮವಿಶ್ವಾಸದಿಂದ ಮುಂದುವರೆಯಲು ಕಾರಣವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪಂಚಾಯತ್ ರಾಜ್ ಪರಿಷತ್ತಿನ ಗೌರವ ಅಧ್ಯಕ್ಷರೂ ಆದ ಸಚಿವರು ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
11.5 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಗ್ರಾಮ ಪಂಚಾಯಿತಿಗಳು 1.200 ಕೋಟಿ ರೂಪಾಯಿಗಳ ದಾಖಲೆ ಮಟ್ಟದ ತೆರಿಗೆ ಸಂಗ್ರಹಿಸುವ ಮೂಲಕ ಗ್ರಾಮ ಸರ್ಕಾರಗಳು ಆರ್ಥಿಕ ಶಕ್ತಿಯನ್ನು ವೃದ್ಧಿಸಿಕೊಂಡಿವೆ, ನರೇಗಾ ಯೋಜನೆಯಡಿ 13 ಕೋಟಿ ಮಾನವದಿನಗಳನ್ನು ಸೃಜಿಸಿ ಮಹಿಳೆಯರು ಈ ಯೋಜನೆಯಲ್ಲಿ ದಾಖಲೆ ಮಟ್ಟದಲ್ಲಿ ಪಾಲ್ಗೊಳ್ಳುವಂತಾಗಿದೆ. ಇದಲ್ಲದೆ ಮಹತ್ವದ ಕಲ್ಯಾಣ ಪಥ ಹಾಗೂ ಪ್ರಗತಿ ಪಥ ಯೋಜನೆಯಲ್ಲಿ 9,000 ಕಿ.ಮೀ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಈ ವರ್ಷ ಕೃಷಿ ಪಥ ಯೋಜನೆಯ ಮೂಲಕ ರೈತರ ನೆರವಿಗೆ ನಿಲ್ಲಲು ಯೋಜಿಸಲಾಗಿದೆ ಎಂಬ ಮಾಹಿತಿಯನ್ನು ಸಚಿವರು ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯತಿಗಳನ್ನು ದತ್ತು ಪಡೆದು ಯೋಜನೆಗಳ ಅನುಷ್ಠಾನವನ್ನು ಪರಿಣಾಮಕಾರಿಗೊಳಿಸುವ ಕಾಯಕ ಗ್ರಾಮ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸಚಿವರು ಪ್ರಕಟಿಸಿ, ಈ ಹೊಸ ಯೋಜನೆಗಳು ಮುಂದಿನ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿ ತರುತ್ತವೆ ಎಂಬ ನಿರೀಕ್ಷೆಯಲ್ಲಿ ತಾವಿರುವುದಾಗಿ ಹೇಳಿದರು.
ಸಮೃದ್ಧ ಕರ್ನಾಟಕವನ್ನು ಕಾಣಲು ಸಮೃದ್ಧ ಪಂಚಾಯತ್ ಗಳನ್ನು ಸೃಷ್ಟಿಸಬೇಕು ಎನ್ನುವ ಗುರಿಯೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಸಚಿವರು ಹೇಳಿದರು.
ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಕಾರ್ಯಾಧ್ಯಕ್ಷ ವಿ.ವೈ.ಘೋರ್ಪಡೆ, ಉಪಾಧ್ಯಕ್ಷರಾದ ಮಾಜಿ ಶಾಸಕ ಡಿ.ಆರ್.ಪಾಟೀಲ್, 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಮಾಜಿ ಶಾಸಕ ಸಿ.ನಾರಾಯಣಸ್ವಾಮಿ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಾಡಶೆಟ್ಟಿಹಳ್ಳಿ ಸತೀಶ್ ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.