ಕಲಬುರಗಿ | ಮುಂಜಾಗ್ರತಾ ಕ್ರಮ ಕೈಗೊಂಡು ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ : ಡಾ.ಅವಿನಾಶ್ ಜಾಧವ್

Update: 2025-03-26 10:37 IST
Photo of Metting
  • whatsapp icon

ಕಲಬುರಗಿ : ಕಾಳಗಿ ಮತಕ್ಷೇತ್ರದ ಅಭಿವೃದ್ಧಿಗಾಗಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಅಹಂ ಬದಿಗಿಟ್ಟು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಶಾಸಕ ಡಾ. ಅವಿನಾಶ್ ಜಾಧವ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಕಾಳಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ 2025-26ನೇ ಸಾಲಿನ ಮುಂಬರುವ ಬೆಸೀಗೆಯ ಕುಡಿಯುವ ನೀರಿನ ಹಾಗೂ ಮೇವಿನ ಸಮಸ್ಯೆಗಳ ಬಗೆಹರಿಸುವ ಕುರಿತು ಹಮ್ಮಿಕೊಂಡ ʼಟಾಸ್ಕ್ ಫೋರ್ಸ್ ಸಭೆʼಯನ್ನು ಉದ್ದೇಶಿಸಿ ಮಾತನಾಡಿದರು.

ಅಧಿಕಾರಿಗಳು ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಮಾಡಬೇಕಾದರೆ ಸಂಬಂಧಿಸಿದ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಿದರೆ ಯಾವುದೇ ಅಡೆತಡೆಯಿಲ್ಲದೆ ಕೆಲಸ ಪೂರ್ಣಗೊಳ್ಳುತ್ತದೆ ಎಂದರು.

ಬೇಸಿಗೆ ಪ್ರಾರಂಭದಲ್ಲೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಕಾಳಗಿ ತಾಲೂಕಿನ ರುಮ್ಮನಗೂಡ, ವಜ್ಜರಗಾಂವ್, ಮೋಘಾ, ಹೊಸ್ಸಳ್ಳಿ(ಎಚ್), ರಟಕಲ್, ಕೊರವಿ ಗಾಂಧಿ ನಗರ ತಾಂಡ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಜೆಜೆಎಮ್ ಕಾಮಗಾರಿ ಅರ್ಧಕ್ಕೆ ನಿಂತಿದೆ, ಕಳಪೆ ಗುಣಮಟ್ಟದಿಂದ ಕೂಡಿದೆ, ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸಿಸುತ್ತಿದ್ದಾರೆ ಎಂದು ಜೆಜೆಎಮ್ ಅಧಿಕಾರಿಗೆ ಶಾಸಕ ಡಾ. ಅವಿನಾಶ್ ಜಾಧವ್ ತರಾಟೆಗೆ ತೆಗೆದುಕೊಂಡರು. ಶೀಘ್ರದಲ್ಲೇ ಅರ್ಧಕ್ಕೆ ನಿಂತಿರುವ ಕಾಮಗಾರಿ ಗುಣಮಟ್ಟದಿಂದ ಪೂರ್ಣಗೊಳಿಸಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.

ತಾಲೂಕು ಕೃಷಿ ಅಧಿಕಾರಿ ಸಂಜೀವಕುಮಾರ ಮಾತನಾಡಿ, ಕಾಳಗಿ ತಾಲೂಕಿಗೆ 46ಕೋಟಿ 68ಲಕ್ಷ ರೂ. ಬೆಳೆ ವಿಮೆ ಮಂಜೂರಾಗಿದ್ದು 15,605 ರೈತರಿಗೆ ಒಂದು ವಾರದಲ್ಲಿ ಬೆಳೆ ವಿಮೆ ಹಣ ಅವರ ಖಾತೆಗೆ ಜಮೆ ಆಗಲಿದೆ ಎಂದು ಹೇಳಿದರು.

ಕಾಳಗಿ ಪಟ್ಟಣದ ಪಟ್ಟಣ ಪಂಚಾಯತಿಯಲ್ಲಿ ನಗರೋತ್ಥಾನ ಕಾಮಗಾರಿ ಕಳಪೆ ಹಾಗೂ ಅರ್ಧಕ್ಕೆ ಸ್ಥಗಿತಗೊಂಡಿರುವ ದೂರು ಬಂದಿದ್ದು ಅದನ್ನು ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಪಪಂ ಮುಖ್ಯಾಧಿಕಾರಿ ಪಂಕಾಜ ಅವರಿಗೆ ಶಾಸಕ ಡಾ. ಅವಿನಾಶ್ ಜಾಧವ್ ಸೂಚನೆ ನೀಡಿದರು.

ಕಾಳಗಿ ಪಟ್ಟಣ ಪಂಚಾಯತಿಗೆ 15ನೇ ಹಣಕಾಸು ಅನುದಾನ ಬಂದಿಲ್ಲ ಅದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತರುತ್ತಿದ್ದಂತೆ ಕೆಕೆಆರ್ ಡಿಬಿ ಯಿಂದ ಪಟ್ಟಣ ಪಂಚಾಯತ್,ಗೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.

ತಹಶಿಲ್ದಾರರ ಘಮಾವತಿ ರಾಠೋಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಸವಲಿಂಗಪ್ಪ ಡಿಗ್ಗಿ, ಕೃಷಿ ಅಧಿಕಾರಿ ಸಂಜೀವಕುಮಾರ, ಪಶುವೈದ್ಯ ಗೌತಮ ಕಾಂಬಳೆ, ಸಮುದಾಯ ಆರೋಗ್ಯ ಅಧಿಕಾರಿ ಡಾ. ಅಮರೇಶ ಎಮ್.ಎಚ್, ಪಪಂ ಮುಖ್ಯಾಧಿಕಾರಿ ಪಂಕಜಾ ಎ, ಗ್ರೇಡ್-2 ತಹಶಿಲ್ದಾರ ರಾಜೇಶ್ವರಿ, ಪಿಡ್ಲ್ಬೂಡಿ ಎಇಇ ಮಲ್ಲಿಕಾರ್ಜುನ ದಂಡಿನ, ಪಂಚಾಯತ್ ರಾಜ್, ಸಮಾಜ ಕಲ್ಯಾಣ ಇಲಾಖೆ, ಸಿಡಿಪಿಓ, ಜೆಜೆಎಮ್ ಅಧಿಕಾರಿಗಳು, ತಾಲೂಕಿನ ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News