ಕಲಬುರಗಿ | ಪ್ರಸವಪೂರ್ವ ಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ : ಡಾ.ಶಂಕ್ರಪ್ಪ ಮೈಲಾರಿ

ಕಲಬುರಗಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಕ್ಷಮ ಪ್ರಾಧಿಕಾರ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕೋಶ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಗರ್ಭಧಾರಣ ಮತ್ತು ಪ್ರಸವಪೂರ್ವ ಪತ್ತೆ ಹಚ್ಚುವ ತಂತ್ರವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಅಧಿನಿಯಮ 1994 ನಿಯಮಗಳು ಹಾಗೂ 2014ರ ಕುರಿತು ಕಲಬುರಗಿ ವಿಭಾಗೀಯ ಮಟ್ಟದ ಕಾರ್ಯಾಗಾರವನ್ನು ಮಂಗಳವಾರ ಕಲಬುರಗಿ ನಗರದ ಜೆಸಿಪಿ ಹೊಟೇಲ್ ನಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ವಿಭಾಗದ ವಿಭಾಗಿಯ ಸಹ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ ಅವರು, ಸಾರ್ವಜನಿಕರಿಗೆ ಕುಸಿಯುತ್ತಿರುವ ಲಿಂಗಾನುಪಾತದಿಂದ ಸಮಾಜದಲ್ಲಾಗುವ ದುಷ್ಪರಿಣಾಮಗಳನ್ನು ತಿಳಿಸಬೇಕಾಗಿದೆ. ಗಂಡು ಮಗು ಬೇಕೆಂಬ ಹಂಬಲ, ಪಿತೃ ಪ್ರಧಾನ ವ್ಯವಸ್ಥೆ, ವಂಶೋದ್ಧಾರಕ ಬೇಕೆಂಬ ಆಸೆಗಳಿಂದ ಸಮಾಜವು ಹೊರಬಂದು ಹೆಣ್ಣು ಮಗುವಿನ ಜನನವನ್ನು ಸಂಭ್ರಮಿಸಿ ಹೆಣ್ಣು ಮಗುವನ್ನು ಉಳಿಸಿ, ಓದಿಸಿ, ಸಮಾಜದಲ್ಲಿ ಸ್ಥಾನಮಾನ ನೀಡಬೇಕಾಗಿರುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಾಗಾರದಲ್ಲಿ ಉಪನಿರ್ದೇಶಕ ಡಾ.ಶರಣಬಸಪ್ಪ ಗಣಜಲ ಖೇಡ್, ಡಾ.ಅಂಬಾರಾಯ.ಎಸ್.ರುದ್ರವಾಡಿ, ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವಶರಣಪ್ಪ ಎಂ.ಡಿ.ಭೂಸನೂರ್ ಹಾಗೂ ಕಲಬುರಗಿ ಜಿಲ್ಲೆಯ ನೋಡಲ್ ಅಧಿಕಾರಿಗಳು ಹಾಗೂ ಕುಟುಂಬ ಕಲ್ಯಾಣ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು
ಸದರಿ ವಿಭಾಗಿಯ ಕಾರ್ಯಗಾರಕ್ಕೆ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಯ ಜಿಲ್ಲಾ ಸಮಿತಿಯ ಸದಸ್ಯರುಗಳು ಹಾಗೂ ಎಲ್ಲಾ ಜಿಲ್ಲೆಯ ಜಿಲ್ಲಾ ತಪಾಸಣೆ ಮತ್ತು ಮೇಲ್ವಿಚಾರಣೆ ಸಮಿತಿಯ ಸದಸ್ಯರುಗಳು ಹಾಜರಿದ್ದರು.