ಯಾದಗಿರಿ | ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

ಯಾದಗಿರಿ : ಜಿಲ್ಲೆಯ ಮನರೇಗಾ ಯೋಜನೆ ಸಮರ್ಪಕ ಜಾರಿಗಾಗಿ ಸತತ 100 ದಿನಗಳ ಕೆಲಸಕ್ಕೆ ಒತ್ತಾಯಿಸಿ ಮತ್ತು ವಿವಿಧ 26 ಬೇಡಿಕೆಗಳ ಈಡೆರೀಕೆಗಾಗಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬುಧವಾರ ಧರಣಿ ಸತ್ಯಾಗ್ರಹ ನಡೆಸಿದರು.
ಈ ವೇಳೆ ಮಾತನಾಡಿದ ಹಿರಿಯ ಹೋರಾಟಗಾರ್ತಿ ನೀಲಾ ಕೆ., ಏ.1ರಿಂದ ಸತತ ಕೆಲಸ ನೀಡಬೇಕು, ಒಂದೇ ಸಲಕ್ಕೆ ಎನ್ಎಂಆರ್ ಪ್ರಿಂಟ್ ನೀಡಬೇಕು, ನಿರುದ್ಯೋಗ ಭತ್ತೆ ಜಾರಿಮಾಡಬೇಕು, ಪೂರ್ಣ ಪ್ರಮಾಣದ ಕೂಲಿ ನೀಡಬೇಕು, ಬೇಸಿಗೆ ಇರುವುದರಿಂದ ಕಡಿಮೆ ಕೆಲಸ ಕೊಡಬೇಕು, ದಿನಕ್ಕೆ 600 ರೂ. ಕೂಲಿ ವರ್ಷಕ್ಕೆ 200 ದಿನ ಕೆಲ ನೀಡಬೇಕೆಂದು ಅಗ್ರಹಿಸಿದರು.
ಫಾರಂ ನಂ.6 ಪ್ರಕಾರವೇ ಕೆಲಸ ನೀಡಬೇಕು, ಸುರಪುರ ತಾಲೂಕಿನ ಏವೂರ ಗ್ರಾಪಂನ ಅರಣ್ಯ ಇಲಾಖೆಯಲ್ಲಿ ದುಡಿದವರ ಎನ್ಎಂಆರ್ ಶೂನ್ಯ ಮಾಡಿದ್ದು, ಕೂಡಲೇ ಕೂಲಿ ನೀಡಬೇಕು, ಈ ಪಂಚಾಯತ್ ಪಿಡಿಒ ಅವರನ್ನು ವರ್ಗ ಮಾಡಬೇಕು, ಹೊಸ ಜಾಬ್ ಕಾರ್ಡ್ ಮತ್ತು ವಿಕಲಚೇತನರಿಗೆ ಪ್ರತ್ಯೇಕ ಜಾಬ್ ಕಾರ್ಡ್ ನೀಡಬೇಕು, ನಾಗನಟಗಿ ಗ್ರಾಪಂ ಆಪರೇಟರನನ್ನು ಕೂಡಲೇ ವರ್ಗಾಯಿಸಬೇಕು, ಕೆಲಸ ಮಾಡಿದರೂ ಕೂಲಿಕಾರರಿಗೆ ಆಗುತ್ತಿರುವ ಮೊಸ ನಿಲ್ಲಬೇಕೆಂದು ನೀಲಾ ಒತ್ತಾಯಿಸಿದರು.
ಸುಮಾರು 1500ಕ್ಕೂ ಹೆಚ್ಚು ಜನರು ಧರಣಿಯಲ್ಲಿ ಭಾಗವಹಿಸಿದ್ದರು. ಈ ಎಲ್ಲ ಬೇಡಿಕೆಗಳಿಗೆ ಲಿಖಿತ ಉತ್ತರ ಕೊಡುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಇಳಿಹೊತ್ತಿನತನಕ ಟೆಂಟ್ ನಲ್ಲಿಯೇ ಇದ್ದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ್, ಜಿಲ್ಲಾ ಕಾರ್ಯದರ್ಶಿ ಅಯ್ಯಪ್ಪ ಅನಪುರ ಹಾಗೂ ಮಲ್ಲಮ್ಮಕೊಡ್ಲಿ, ರಂಗಮ್ಮ ಕಟ್ಟಿಮನಿ, ಶರಣಬಸವ ಜಂಬಲದಿನ್ನಿ, ಮುಮ್ತಾಜ್ ಬೇಗಂ, ಹಣಮಂತ ಗೋನಾಲ್, ದೇವಿಂದ್ರಪ್ಪ ಮೇಟಿ, ಪ್ರಕಾಶ ಆಲ್ದಾಳ್, ಮಹಾದೇವಪ್ಪ , ನಿಂಗಪ್ಪ ಕುರಕುಂದಾ ಸೇರಿದಂತೆಯೇ ಇತರರಿದ್ದರು.