ಕಲಬುರಗಿ | ಗೋದುತಾಯಿ ಬಿ.ಎಡ್ ಕಾಲೇಜಿನಲ್ಲಿ ‘ಜ್ಞಾನಶಕ್ತಿ' ವಿದ್ಯಾರ್ಥಿ ಸಂಘ ಉದ್ಘಾಟನೆ

ಕಲಬುರಗಿ : ಜ್ಞಾನವು ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡುವುದಲ್ಲದೆ ಜಗತ್ತನ್ನು ಗೆಲ್ಲವು ಶಕ್ತಿ ಹೊಂದಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಢಗೆ ಐಪಿಎಸ್ ಅವರು ಹೇಳಿದರು.
ನಗರದ ಗೋದುತಾಯಿ ಶಿಕ್ಷಣ(ಬಿ.ಎಡ್) ಮಹಾವಿದ್ಯಾಲಯದಲ್ಲಿ ಮಂಗಳವಾರ ಜ್ಞಾನಶಕ್ತಿ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜ್ಞಾನವು ಕೀರ್ತಿ, ಶಕ್ತಿ, ಅಧಿಕಾರ, ಹಣ, ಸ್ಥಾನ ಪಡೆಯುವುದರ ಪರಮಶಕ್ತಿಯಾಗಿದೆ. ವಿದ್ಯಾರ್ಥಿನಿಯರು ನಿರಂತರವಾಗಿ ಓದಿನಲ್ಲಿ ತೊಡಗಿಸಿಕೊಳ್ಳಬೇಕು ಅಂದಾಗ ಮಾತ್ರ ಜ್ಞಾನದ ದೀವಿಗೆ ಬೆಳೆಸಿಕೊಳ್ಳಲು ಸಾಧ್ಯ. ಜ್ಞಾನವು ಜೀವನದ ಅತ್ಯಗತ್ಯ ಭಾಗವಾಗಿದ್ದು, ಅದು ನಮಗೆ ಹೊಸ ವಿಷಯಗಳನ್ನು ಕಲಿಯುವುದು ಮತ್ತು ಇತರರನ್ನು ಅರ್ಥಮಾಡಿಕೊಳ್ಳುವಂತಹ ಅವಕಾಶಗಳನ್ನು ಒದಗಿಸುತ್ತದೆ. ಸಬಲೀಕರಣಗೊಳಿಸುತ್ತದೆ, ಉತ್ತಮ ಕೆಲಸಗಳನ್ನು ಮಾಡಲು ಪ್ರೇರೆಪಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಪೂಜ್ಯ ದೊಡ್ಡಪ್ಪ ಅಪ್ಪ ಅವರು ಮಹಿಳೆಯರಿಗಾಗಿಯೇ ಮೊದಲಿಗೆ ಶಾಲೆ ಆರಂಭಿಸಿ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಮಹಿಳೆಯರಿಗಾಗಿ ಅನೇಕ ಉನ್ನತ ಕೋರ್ಸುಗಳನ್ನು ತೆರೆದು ಈ ಭಾಗದ ಮಹಿಳೆಯರು ಶೈಕ್ಷಣಿಕವಾಗಿ ಬೆಳೆಯಲು ಕಾರಣಿಕರ್ತರಾದರು. ಶಿಕ್ಷಣವೆಂಬುವುದು ಕೇವಲ ಪಠ್ಯವಲ್ಲ ಅದು ಸಂಸ್ಕಾರ ಕಲಿಸುವ ರಾಜಮಾರ್ಗವಾಗಿದ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಗಳಾದ ಶರಣಬಸವೇಶ್ವರ ದೇವಸ್ಥಾನ ಆರವಣದ ಶಾಲಾ ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ದೊಡ್ಡಪ್ಪ ಅಪ್ಪ ಅವರು ಅನ್ನದಾಸೋಹದ ಜೊತೆಗೆ ಅಕ್ಷರ ದಾಸೋಹ ಆರಂಭಿಸಿದರು. ಹೆಣ್ಣು ಮಕ್ಕಳಿಗಾಗಿಯೇ ಮಹಿಳಾ ಶಾಲೆಗಳನ್ನು ತೆರೆದರು. ಅವರು ನೆಟ್ಟ ಶಿಕ್ಷಣವೆಂಬ ಗಿಡ ಇಂದು ಹೆಮ್ಮರವಾಗಿ ಬೆಳೆದು ಜಗತ್ತಿನ ಶಿಕ್ಷಣ ಪ್ರೇಮಿಗಳನ್ನು ಕಲಬುರಗಿಯತ್ತ ಕೈ ಬೀಸಿ ಕರೆಯುವಂತೆ ಮಾಡಿದ್ದಾರೆ. ಅವರು ಆರಂಭಿಸಿದ ಶಿಕ್ಷಣ ಸಂಸ್ಥೆಗೆ ‘ಸಂಜೀವಿನಿ’ಯಾಗಿ ನಿಂತವರು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು. ಅವರೊಂದಿಗೆ ಪೂಜ್ಯ ಡಾ.ದಾಕ್ಷಾಯಿಣಿ ಅವ್ವಾ ಮತ್ತು ಬಸವರಾಜ ದೇಶಮುಖ ಅವರು ವಿದ್ಯಾರ್ಥಿಗಳ ಬೆಳವಣಿಗೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವೇದಿಕೆ ಮೇಲೆ ಪ್ರಾಚಾರ್ಯರಾದ ಡಾ.ಪುಟ್ಟಮಣಿ ದೇವಿದಾಸ, ಡಾ.ಎಂ.ಆರ್.ಹುಗ್ಗಿ, ಬಾಬುರಾವ ಚವ್ಹಾಣ ಇದ್ದರು. ಪ್ರಾಧ್ಯಾಪಕಿ ಶಕುಂತಲಾ ಖಜೂರಿ ಅತಿಥಿಗಳ ಪರಿಚಯ ಮಾಡಿದರು. ಸುಂದರಬಾಯಿ ನಾಗಶೆಟ್ಟಿ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.