ಕಲಬುರಗಿ | ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಅಗತ್ಯ : ಡಾ.ಝಾರಾ ಫಾತಿಮಾ

ಕಲಬುರಗಿ : ಆಧುನಿಕ ಯುಗದಲ್ಲಿ ಆಹಾರ ಮತ್ತು ಜೀವನ ಶೈಲಿ ಬದಲಾದಂತೆ ವಿದ್ಯಾರ್ಥಿನಿಯರು ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಮೂಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸನ್ ರೈಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಝಾರಾ ಫಾತಿಮಾ ಹೇಳಿದರು.
ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಮೌನ ಯೋಗಿ ಫೌಂಡೇಶನ್ ಮತ್ತು ಸನ್ರೈಸ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರ ಮತ್ತು ಕ್ಯಾನ್ಸರ್ ಹಾಗೂ ಮಹಿಳೆಯರ ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಆಹಾರ ಪದ್ಧತಿಯನ್ನು ಸದೃಢ ಮಾಡಿಕೊಳ್ಳಬೇಕು. ಜಂಕ್ ಫುಡ್ ಗಳನ್ನು ತ್ಯಜಿಸಬೇಕು. ಅತಿಯಾದ ಸಕ್ಕರೆಯನ್ನು ಸೇವಿಸಬಾರದು. ವಿದ್ಯಾರ್ಥಿನಿಯರು ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು. ಸ್ವಯಂ ವೈದ್ಯಕೀಯ ಮಾಡಿಕೊಳ್ಳಬಾರದು. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ ಶತ 75 ಸಾವಿರ ಮಹಿಳೆಯರು ಗರ್ಭಕಂಠ (cervix) ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿದ್ದಾರೆ. ಸತತವಾಗಿ ವೈದ್ಯರ ಮರ‍್ಗರ‍್ಶನದಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿದ್ದರೆ 30 ವರ್ಷದಿಂದ 65 ವರ್ಷದ ವಯಸ್ಸಿನ ಮಹಿಳೆಯರ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ಮುಖ್ಯ ಅತಿಥಿ ಸಮಾಧಾನ ಆಶ್ರಮದ ಗುರುಬಂಧು ನೀಲಮ್ಮ ಅಂಗಡಿಯವರು, ಶಾಂತಂಲಿಂಗೇಶ್ವರ ಮಹಾಸ್ವಾಮೀಜಿಗಳು ಕಲಬುರಗಿ ನಗರದಲ್ಲೇ ಏಷ್ಯಾ ಖಂಡದಲ್ಲಿರುವ ಶಂಖಾಕೃತಿಯ ಏಕೈಕ ಬೃಹತ್ ಧ್ಯಾನ ಮಂದಿರವನ್ನು ವೈಜ್ಞಾನಿಕವಾಗಿ ಹಾಗೂ ಶಾಸ್ಟ್ರೋಕ್ತವಾಗಿ ನಿರ್ಮಾಣ ಮಾಡಿದ್ದಾರೆ. ನಮ್ಮಲ್ಲಿ ಬಿಸಿಲು 44 ಡಿಗ್ರಿ ಸೆಲ್ಸಿಯಸ್ ಹೊರಗಡೆ ತಾಪಮಾನ ಇದ್ದರೆ, ಧ್ಯಾನ ಮಂದಿರದ ಒಳಗಡೆ 8 ರಿಂದ 10 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ಇರುತ್ತದೆ. ಧ್ಯಾನದ ಬಗ್ಗೆ ಗೊತ್ತಿರದವರೂ ಒಳಗಡೆ ಕುಳಿತರೆ ಸಾಕು ಧ್ಯಾನದ ಸ್ಥಿತಿಗೆ ತೆಗೆದುಕೊಂಡು ಹೋಗುವ ಶಕ್ತಿ ಈ ಸ್ಥಳಕ್ಕಿದೆ. ಧ್ಯಾನದಿಂದ ಮನಸ್ಸು ಹಗುರವಾಗಿ ಯಾವುದೇ ಸನ್ನಿವೇಶವನ್ನು ಸಮಾಧಾನದಿಂದ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಆರೋಗ್ಯ ವಿಭಾಗದ ಮುಖ್ಯಸ್ಥೆ ಮಂಗಳಾ ಬಿರಾದಾರ್ ಸ್ವಾಗತಿಸಿದರು. ದಾನೇಶ್ವರಿ ಪ್ರಾರ್ಥಿಸಿದರೆ, ಅಕ್ಷತಾ ವಂದಿಸಿದರು.
ವೇದಿಕೆ ಮೇಲೆ ವಿಜಿ ವುಮೆನ್ಸ್ ಕಾಲೇಜಿನ ಮಂಗಳಾ ಬಿರಾದರ್, ಸಮಾಧಾನ ಆಶ್ರಮದ ಪ್ರಮುಖರಾದ ಕುಮಾರ್ ಶೆಟ್ಟಿ, ನೀಲಮ್ಮ ಅಂಗಡಿ, ಡಾ.ಜಾರಾ ಫಾತಿಮಾ,ಕಾಲೇಜಿನ ಉಪಪ್ರಾಂಶುಪಾಲೆ ಡಾ.ವೀಣಾ ಹುನಗುಂಟಿಕರ್ ವಹಿಸಿದ್ದರು. ನೂರಾರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಚಿತ ಅರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಶಿಬಿರದ ಲಾಭ ಪಡೆದರು.