ಕಲಬುರಗಿ | ಈಜಲು ಹೋದ ಎಸೆಸೆಲ್ಸಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು

ಪ್ರಜ್ವಲ್
ಕಲಬುರಗಿ : ಭೀಮಾ ನದಿಯಲ್ಲಿ ಈಜಲು ತೆರಳಿದ್ದ ಎಸೆಸೆಲ್ಸಿ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದಲ್ಲಿ ನಡೆದಿದೆ.
ಹರವಾಳ ಗ್ರಾಮದ ನಿವಾಸಿ ಪ್ರಜ್ವಲ್ (16) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಪ್ರಜ್ವಲ್, ಚನ್ನೂರ ಸಮೀಪದ ಆದರ್ಶ ವಿದ್ಯಾಲಯದಲ್ಲಿ ಎಸೆಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಮಾ. 21ರಂದು ಎಸೆಸೆಲ್ಸಿ ಇಂಗ್ಲಿಷ್ ಭಾಷೆಯ ಪರೀಕ್ಷೆ ಬರೆದು ಸೋಮವಾರದವರೆಗೆ ರಜೆ ಇದ್ದ ಕಾರಣ ಸ್ವಗ್ರಾಮಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.
ಗೆಳೆಯರ ಜೊತೆಗೂಡಿ ಈಜಲು ಭೀಮಾ ನದಿಗೆ ತೆರಳಿದ್ದ ಪ್ರಜ್ವಲ್, ಈಜು ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ಸೋಮವಾರ ಸಂಜೆ ನದಿಯಿಂದ ಮೃತದೇಹ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ಚಿದಾನಂದ ಸವದಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.