ಕಲಬುರಗಿ | ನೀರಿನ ಸಮಸ್ಯೆ ಬಗೆಹರಿಸುವಂತೆ ರಸ್ತೆ ತಡೆದು ಪ್ರತಿಭಟನೆ

ಕಲಬುರಗಿ : ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರ ದಿನ ನಿತ್ಯ ಪರದಾಡುವಂತಾಗಿದ್ದು, ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಗ್ರಾಮಸ್ಥರು, ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿಗಳು ಹಣ ಖರ್ಚಾದರೂ ಕುಡಿಯಲು ನೀರು ಸಿಗುತ್ತಿಲ್ಲ, ಜಲ್ ಜೀವನ್ ಮಿಷನ್ ( ಜೆಜೆ ಎಂ ಯೋಜನೆ) ಸಂಪೂರ್ಣವಾಗಿ ಕಳಪೆ ಮಟ್ಟದ ಕಾಮಗಾರಿ ಮಾಡಿ ಹೆಸರಿಗೆ ಮಾತ್ರ ಮನೆಗಳಿಗೆ ನಳಗಳ ಇವೆ ಅದಕ್ಕೆ ಒಂದು ಹನಿ ನೀರು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಿಗಾಗಿ ದಿನಾ ಬೆಳಗಾದರೆ ಹೆಣ್ಣುಮಕ್ಕಳು ಹಿಡಿ ಶಾಪಾ ಹಾಕುತ್ತಿದ್ದಾರೆ. ಸಾರ್ವಜನಿಕರ ಪಾಲಿಗೆ ಗ್ರಾಮ ಪಂಚಾಯತ್ ಇದ್ದು ಇಲ್ಲದಂತಾಗಿದೆ. ಹಿಂದೂ- ಮುಸ್ಲಿಮ್ ಪವಿತ್ರ ಹಬ್ಬವಾದ ಯುಗಾದಿ - ರಮಝಾನ್ ಹಬ್ಬದ ಸಮಯದಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ. ಕೂಡಲೇ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಮಾಡಿ ನೀರು ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.
ಜೆಜೆ ಎಂ ಯೋಜನೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕು. ರಟಕಲ್ ನೀರಿನ ಟ್ಯಾಂಕ್ ನಿಂದ ಬಸ್ ನಿಲ್ದಾಣದ ವರೆಗೆ ಹೊಸದಾಗಿ ಪೈಪ್ ಲೈನ್ ಮಾಡಬೇಕು. ರಟಕಲ್ ಬಸ್ ನಿಲ್ದಾಣ ಹತ್ತಿರ ವಿರುವ ಪ್ಲಾಟ್ ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಹೊಸದಾಗಿ ಇನ್ನೊಂದು ಬೊರ್ ವೆಲ್ ಮತ್ತೊಂದು ಸಾರ್ವಜನಿಕ ಕುಡಿಯುವ ನೀರಿನ ಟಾಕಿ ಪೈಪ್ ಲೈನ್ ಮಾಡಬೇಕೆಂದು ಒತ್ತಾಯಿಸಿದರು. ನಂತರ ತಹಶಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಸೇನೆ ರೈತ ಸಂಘದ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ, ಶರಣಬಶಪ್ಪ ಮಮಶೆಟ್ಟಿ, ರೇವಣಸಿದ್ಧ ಬಿರಾದಾರ್, ವಿಜಯಕುಮಾರ್ ಜಡಗಿ, ಸುಬ್ಬಣ್ಣ ಹೂಳಗೇರಾ, ವಿನೋದ್ ಸಿಗಿ, ಅಜಿತ್ ಧರಣಿ, ಸರ್ದಾರ್ ಕೊರಬ, ಅನಿಲ್ ಹೊಳಗೇರಾ, ಜಲಿಲ್ ಮಿಯಾ, ಆಕಾಶ್ ಸಾಲಿಮಠ, ನಾಗರಾಜ ಹಡಪದ ಸೇರಿದಂತೆ ಮತ್ತಿತರರು ಇದ್ದರು.