ಕಲಬುರಗಿ | ವಿಶೇಷ ತರಗತಿಯ ವಿಚಾರ ಕೈ ಬಿಡಬೇಕು : ಧನಸಿಂಗ್ ರಾಠೋಡ

ಕಲಬುರಗಿ : 9ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ 1 ರಿಂದ ವಿಶೇಷ ತರಗತಿಗಳನ್ನು ನಡೆಸಬೇಕೆಂಬ ವಿಚಾರವನ್ನು ಕೈ ಬಿಡುವಂತೆ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯ ಖಜಾಂಚಿ ಧನಸಿಂಗ ರಾಠೋಡ ಆಗ್ರಹಿಸಿದರು.
ಜೇವರ್ಗಿ ಪಟ್ಟಣದ ಮಿನಿ ವಿಧಾನ ಸೌಧ ಆವರಣದಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯ ಖಜಾಂಚಿ ಧನಸಿಂಗ್ ರಾಠೋಡ ಮಾತನಾಡಿ, ಪ್ರೌಢ ಶಾಲೆಗಳಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಗೆ 2025 ನೇ ಸಾಲಿನ ಮೇ 1 ರಿಂದ ವಿಶೇಷ ತರಗತಿಗಳನ್ನು ನಡೆಸುವ ವಿಚಾರ ವ್ಯಕ್ತಪಡಿಸಲಾಗಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುತ್ತದೆ. ಆರೋಗ್ಯ ಸಚಿವರು ಸಾರ್ವಜನಿಕರಿಗೆ ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿರುತ್ತಾರೆ. ಆದರೆ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಶಾಲೆಗಳಿಗೆ ತೆರಳುವುದರಿಂದ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಮೇಲೆ ಮಾನಸಿಕ ಒತ್ತಡವನ್ನೆರಿ, ಒತ್ತಾಯಪೂರ್ವಕವಾಗಿ ಇದನ್ನು ಜಾರಿಗೊಳಿಸಿದ್ದೆ ಆದಲ್ಲಿ ಸಂಘವು ರಾಜ್ಯ ವ್ಯಾಪಿ ಹೋರಾಟ ಮಾಡಬೇಕಾಗುತ್ತದೆ. ಕೂಡಲೆ ವಿಶೇಷ ತರಗತಿಗಳನ್ನು ನಡೆಸುವ ವಿಚಾರವನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಾನಪ್ಪಗೌಡ ಹಳಿಮನಿ, ಸುರ್ಯಕಾಂತ ದ್ಯಾಮಗೊಂಡ, ಮಹ್ಮದ ಅಲಿ ಸಾಲೋಡಗಿ, ಶರಣಪ್ಪ ಪರಸಗೊಂಡ, ಅಮೋಗೆಪ್ಪ ದೇವರಮನಿ, ಬಾಪುಗೌಡ, ಅನಿಲ ಬಿರಾದಾರ, ಎಸ್ ಆರ್ ಪಾಟೀಲ್, ಶಿವಯೋಗಿ ಸಿರಸಗಿಕರ, ಹಣಮಂತ ಸರ್, ಶಾಂತಕುಮಾರ ಗೋಬಿಮಠ ಸೇರಿದಂತೆ ಅನೇಕ ಶಿಕ್ಷಕರಿದ್ದರು.