ಕಲಬುರಗಿ | ಮಾ.25ರಂದು ಶೋಷಿತರ ಸಂಘರ್ಷ ದಿನಾಚರಣೆ: ಅರ್ಜುನ ಗೊಬ್ಬೂರಕರ್

Update: 2025-03-22 21:07 IST
Photo of Press meet
  • whatsapp icon

ಕಲಬುರಗಿ: ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ ಸತ್ಯಾಗ್ರಹದ ನೆನಪಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಲಬುರಗಿ ಜಿಲ್ಲಾ ಘಟಕದಿಂದ ಮಾ.25ರಂದು ಬೆಳಗ್ಗೆ 11.30ಕ್ಕೆ ನಗರದ ಕನ್ನಡ ಭವನದಲ್ಲಿ ʼಶೋಷಿತರ ಸಂಘರ್ಷ ದಿನಾಚರಣೆʼ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿ ಸದಸ್ಯ ಅರ್ಜುನ ಗೊಬ್ಬೂರಕರ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಲ್ಲಮಪ್ರಭು ಪಾಟೀಲ್, ಪಾಲಿಕೆ ಮೇಯರ್ ಯಲ್ಲಪ್ಪ ನಾಯಕೋಡಿ ಆಗಮಿಸಲಿದ್ದಾರೆ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಿರಣ ಗಾಜನೂರ ಮತ್ತು ಚಿಂತಕ ಆರ್.ಕೆ.ಹುಡಗಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದು, ಅತಿಥಿಗಳಾಗಿ ಸಮಿತಿಯ ಮುಖಂಡರಾದ ರಮೇಶ ಡಾಕುಳಕಿ, ರಾಮಣ್ಣ ಕಲ್ಲದೇವನಹಳ್ಳಿ, ನಾಗಣ್ಣ ಬಡಿಗೇರ ಮತ್ತು ಜಿಲ್ಲೆ, ನಗರದ ಪ್ರಗತಿಪರ ಚಿಂತಕರು, ಡಾ.ಅಂಬೇಡ್ಕರ್ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು.

ಮಹಾಡ ಸತ್ಯಾಗ್ರಹ ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು, ಇದನ್ನು ಭಾರತದ ಮಟ್ಟದಲ್ಲಿ ದಲಿತ ಚಳವಳಿಗೆ ಅಡಿಪಾಯ ಹಾಕಿದ ಘಟನೆ ಎಂದು ಕರೆಯಲಾಗುತ್ತದೆ. ಡಾ.ಅಂಬೇಡ್ಕರ್ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿರುವ ಮಹಾಡದಲ್ಲಿ 2027ರ, ಮಾ.10 ರಂದು ಸಾರ್ವಜನಿಕವಾಗಿ ಕೆರೆ ನೀರನ್ನು ಮುಟ್ಟುವ ಮೂಲಕ ಇದು ಎಲ್ಲರಿಗೂ ಸೇರಿದ್ದು ಎನ್ನುವುದನ್ನು ಸಾರಿ ಹೇಳಿದರು. ಆ ಮೂಲಕ ಮಾನವ ಹಕ್ಕುಗಳನ್ನು ಎತ್ತಿ ಹಿಡಿದರು. ಈ ನೆನಪಿಗಾಗಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂತೋಷಕುಮಾರ ಜವಳಕರ, ಮಾರುತಿ ಹುಳಗಳಕರ, ಬಾಬುರಾವ ಶೆಳ್ಳಗಿ, ಕಪಿಲ ಸಿಂಗೆ, ದೇವಿಂದ್ರ ಕುಮನಿ, ಶಿವಪುತ್ರ ಮಾವಿನ, ಸತೀಶ ಕೋಬಾಳ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News