ಕಲಬುರಗಿ | ಒಂದು ತಿಂಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ : ಡಾ.ಶರಣಪ್ರಕಾಶ್‌ ಪಾಟೀಲ್‌

Update: 2025-03-22 20:20 IST
ಕಲಬುರಗಿ | ಒಂದು ತಿಂಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ : ಡಾ.ಶರಣಪ್ರಕಾಶ್‌ ಪಾಟೀಲ್‌
  • whatsapp icon

ಕಲಬುರಗಿ : ಮುಂದಿನ ಒಂದು ತಿಂಗಳಿನಲ್ಲಿ ನಗರದ ಜಿಮ್ಸ್ ಆಸ್ಪತ್ರೆಯ ಕಟ್ಟಡದ‌ 8 ರಿಂದ‌ 10ನೇ ಮಹಡಿಯಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶಿಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ಹೇಳಿದರು.

ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ‌ ಅವರು ಅಂತಿಮ‌ ಹಂತದ ಕೆಲಸ ಕಾರ್ಯಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಂದ ದಿನಾಂಕ ಪಡೆದುವ ಶೀಘ್ರವಾಗಿಯೇ ಇದನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗುವುದು ಎಂದರು.

ಕಲಬುರಗಿಯನ್ನು ಹೆಲ್ತ್ ಹಬ್ ಮಾಡಬೇಕೆನ್ನುವ ನಮ್ಮ ಆಶಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪೂರಕವಾಗಲಿದೆ. 175 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. 40 ಕೋಟಿ ರೂ.‌ ವೆಚ್ಚದಲ್ಲಿ ಅಗತ್ಯ ವೈದ್ಯಕೀಯ ಉಪಕರಣಗಳನ್ನು ತರಲಾಗಿದೆ. ಇನ್ನು ಕೆಲವೊಂದು ಉಪಕರಣಗಳು ಬರಬೇಕಿದೆ ಇದಕ್ಕಾಗಿ 7-8 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ ಎಂದರು.

ಜಿಮ್ಸ್ ಆಸ್ಪತ್ರೆಯ 8ನೇ ಮಹಡಿಯಲ್ಲಿ 14 ಡಯಾಲಿಸಿಸ್ ಕೇಂದ್ರ ಆರಂಭ ಮಾಡಲಾಗುತಿದ್ದು, ಇದರಲ್ಲಿ 10 ಹೊಸ ಯಂತ್ರಗಳು ಇರಲಿವೆ. ಇದಲ್ಲದೆ ಇನ್ನು 14 ಯಂತ್ರ ಸ್ಥಾಪನೆಗೆ ಸ್ಥಳಾವಕಾಶ ಇದ್ದು, ಹಂತ ಹಂತವಾಗಿ ಅದನ್ನು ಪೂರ್ಣ ಮಾಡಲಾಗುವುದು. ಇದೇ‌ ಮಹಡಿಯಲ್ಲಿಯೇ ಸೂಪರ್ ಸ್ಪೆಷಾಲಿಟಿ ಸೇವೆಯ ಎಲ್ಲ ಒಪಿಡಿ ಕಾರ್ಯನಿರ್ವಹಣೆ ಮಾಡಲಿವೆ. 5 ಬೆಡ್‌ಗಳ ಕ್ಯಾಜ್ಯುವಲ್ಟಿ ಸಹ ಕಾರ್ಯ ನಿರ್ವಹಿಸಲಿದೆ. 9ನೇ ಮಹಡಿಯಲ್ಲಿ ಒಳ ರೋಗಿಗಳ ಚಿಕಿತ್ಸೆಗೆ ಆರಂಭಿಕವಾಗಿ 77 ಬೆಡ್‌ಗಳಿಂದ ಆರಂಭ ಮಾಡಲಾಗುತ್ತಿದ್ದು, ಮುಂದೆ 200 ಬೆಡ್‌ಗಳ ವರೆಗೆ ಹೆಚ್ಚಳ ಮಾಡಿಕೊಳ್ಳುವ ಎಲ್ಲ ಸಿದ್ಧತೆಗಳಿವೆ. ಇನ್ನು 10ನೇ ಮಹಡಿಯಲ್ಲಿ 6 ಆಪರೇಷನ್ ಥಿಯೇಟರ್‌, 33 ಐಸಿಯು ಬೆಡ್‌ಗಳ್ ಇರಲಿವೆ. ರೋಗಿಗಳ ಅನುಸಾರ ಇದರ ಸಂಖ್ಯೆ 62ರ ವರೆಗೆ ಹೆಚ್ಚಳ ಮಾಡಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 21 ತಜ್ಞ ವೈದರ ನೇಮಕಾತಿಗೆ ಅವಕಾಶ ಇದ್ದು, ಪ್ರಸ್ತುತ 11 ಜನರು ಕೆಲಸ ಆರಂಭಿಸಿದ್ದಾರೆ. ಇನ್ನಿಬ್ಬರು ಬೇರೆಡೆಯಿಂದ ಪ್ರಭಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತ್ಯೇಕ ಸರ್ಸಿಂಗ್ ಸ್ಟಾಫ್ ನೇಮಕ ಮಾಡಲಾಗಿದ್ದು, ಉಳಿದ ಹುದ್ದೆಗಳ ನೇಮಕಾತಿಗೆ ಹೊರಗುತ್ತಿಗೆ ಮೂಲಕ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ‌ ಎಂದು ಸಚಿವರು ಹೇಳಿದರು.

ಹಿರಿಯರ, ವಯೋವೃದ್ಧರ ಬಗ್ಗೆ ರಾಜ್ಯ ಸರಕಾರಕ್ಕೆ ತೀವ್ರ ಕಾಳಜಿ ಇದ್ದು, ಯಾವುದೇ ಹಂತದಲ್ಲು ಅವರಿಗೆ ಅನ್ಯಾಯ ಆಗಲು ಸರ್ಕಾರ ಬಿಡುವುದಿಲ್ಲ. ಬೆಳಗಾವಿ ವೈದ್ಯಕೀಯ ಆಸ್ಪತ್ರೆಯಲ್ಲಿ 150 ಜನ ವೃದ್ಧರನ್ನು ಅವರ ಮಕ್ಕಳು ಬಿಟ್ಟು ಹೋಗಿದ್ದಾರೆಂಬ ಮಾಹಿತಿ ಇದೆ. ಇನ್ನು ಬೇರೆ ಕಡೆಯಿಂದಲೂ ಕೂಡ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ನಾಗರಿಕ ಸಮಾಜ ಒಪ್ಪದ ಇಂತಹ ಕೆಟ್ಟ ಸಂಸ್ಕೃತಿಯನ್ನು ನಿಯಂತ್ರಣಕ್ಕೆ ಬೇಕಾದ ಎಲ್ಲಾ ಬಿಗಿ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದರು.

9 ರೋಗಗಳಿಗೆ ಇಲ್ಲಿ ಚಿಕಿತ್ಸೆ :

ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನ್ಯೂರೋ ಸರ್ಜರಿ, ನ್ಯೂರಾಲಜಿ, ಮೆಡಿಕಲ್ ಗ್ಯಾಸ್ಟ್ರೋ ಎಂಟರೋಲಾಜಿ, ಸರ್ಜಿಕಲ್ ಗ್ಯಾಸ್ಟ್ರೋ ಎಂಟರೋಲಾಜಿ, ಪ್ಲ್ಯಾಸ್ಟಿಕ್ ಸರ್ಜರಿ, ಪಿಡಿಯಾಟ್ರಿಕ್ ಸರ್ಜರಿ, ಎಂಡೋಕ್ರಾನಾಲಜಿ, ನೆಫ್ರೋಲೋಜಿ, ಯೂರೋಲೊಜಿ ಚಿಕಿತ್ಸೆ ನೀಡಲಾಗುತ್ತದೆ ಎಂದ ಸಚಿವರು, ಇಂತಹ ಸೇವೆಗಳಿಗೆ ಖಾಸಗಿ ಆಸ್ಪತ್ರೆಗೆ ಬಡ ಜನ ಹೆಚ್ಚಿನ ಹಣ ವ್ಯಯಿಸಬೇಕಿತ್ತು ಎಂದರು.

ಮರಳು ನೀತಿ ಸರಳಿಕರಣ :

ಜನಸಾಮಾನ್ಯರಿಗೆ ಶೀಘ್ರ ಮತ್ತು ಸುಲಭವಾಗಿ ಮರಳು ಸಿಗುವಂತೆ ಮರಳು ನೀತಿಗೆ ಸರಳೀಕರಣ ಮಾಡಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಇನ್ನು ಕಲಬುರಗಿ ಜಿಲ್ಲೆಯಲ್ಲಿ ಮರಳು ಮಾಫಿಯಾಗೆ ಕಡಿವಾಣ ಹಾಕಲು ಎಸ್‌.ಪಿ. ಅಡ್ಡೂರು ಶ್ರೀನಿವಾಸಲು ಅವರಿಗೆ ಸೂಚನೆ ನೀಡಲಾಗಿದೆ ಎಂದರು.

ನಂತರ ಸಚಿವರು ಜಿಮ್ಸ್ ನಿರ್ದೇಶಕ ಡಾ.ಉಮೇಶ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಆರ್. ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಆಸ್ಪತ್ರೆಯಲ್ಲಿಯೇ ಸಭೆ ನಡೆಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News