ಕಲಬುರಗಿ | 101 ನಾಗರಿಕರಿಗೆ ಕಣ್ಣಿನ ಪೊರೆಯ ಯಶಸ್ವಿ ಶಸ್ತ್ರ ಚಿಕಿತ್ಸೆ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ : ಚಿತ್ತಾಪೂರ ತಾಲೂಕಿನಲ್ಲಿರುವ ದೃಷ್ಟಿ ಹೀನ (visually impaired) ವ್ಯಕ್ತಿಗಳಿಗೆ ವಿಶೇಷ ಮೆಗಾ ಅಭಿಯಾನದಡಿಯಲ್ಲಿ ಚಿತ್ತಾಪುರ ತಾಲೂಕು ಆಸ್ಪತ್ರೆಯ ವೈದ್ಯರ ನೆರವಿನಿಂದ ಬೆಂಗಳೂರಿನ ನುರಿತ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನೇರವೇರಿಸುವ ಮೂಲಕ ಅಂಧತ್ವ ನಿವಾರಣೆಗೆ ಶ್ರಮಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾ ಅಂಧತ್ವ ನಿವಾರಣೆ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಪಂಚಾಯತ್ ಸಹಯೋಗದೊಂದಿಗೆ ಚಿತ್ತಾಪುರದ ತಾಲೂಕು ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ʼಬೃಹತ್ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅಭಿಯಾನʼದಲ್ಲಿ ಪುರುಷರು ಹಾಗೂ ಸ್ತ್ರೀಯರು ಸೇರಿದಂತೆ ಒಟ್ಟು 101 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಬೆಂಗಳೂರು ಮೂಲದ ʼಜನಹಿತ್ ಐ ಕೇರ್ ಸೆಂಟರ್ʼ ಸಂಸ್ಥೆಯ ನಾಲ್ವರು ವೈದ್ಯರು ಇಲ್ಲಿನ ತಾಲೂಕು ಆಸ್ಪತ್ರೆಯ ವೈದ್ಯರ ನೆರವಿನೊಂದಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಶಸ್ತ್ರ ಚಿಕಿತ್ಸೆಗೂ ಮುನ್ನ 101 ಜನರಿಗೆ ಸೂಕ್ತ ಆರೋಗ್ಯ ತಪಾಸಣೆ ನಡೆಸಲಾಗಿದೆ. ಶಸ್ತ್ರ ಚಿಕಿತ್ಸೆ ನಂತರ ಅವರಿಗೆ ಅಗತ್ಯವಿರುವ ಐ ಡ್ರಾಪ್, ಮಾತ್ರೆ ಹಾಗೂ ಕಪ್ಪು ಕನ್ನಡಕವನ್ನು ನೀಡಲಾಗಿದ್ದು, ಮುಂದಿನ ಗುರುವಾರದಂದು ತಾಲೂಕು ಆಸ್ಪತ್ರೆಗೆ ಬಂದು ಪುನಃ ಕಣ್ಣಿನ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ. ಅಲ್ಲಿಗೆ ಸರಿಯಾಗಿ ಒಂದು ತಿಂಗಳ ನಂತರ ಅವರಿಗೆ ʼಪ್ರೆಸ್ ಬಯೋಪಿಕ್ ನಿಯರ್ ವಿಷನ್ʼ ಕನ್ನಡಕ ವಿತರಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ಹಾಗೂ ಅಗತ್ಯವಿರುವ ವೈದ್ಯಕೀಯ ನೆರವು ಮತ್ತು ಕನ್ನಡಕವನ್ನು ಉಚಿತವಾಗಿ ವಿತರಿಸಲಾಗುವುದು. ತಾಲೂಕಿನಲ್ಲಿರುವ ಹಿರಿಯ ನಾಗರಿಕರು ಕಣ್ಣಿನ ದೋಷದಿಂದ ಸಮಸ್ಯೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ಬೃಹತ್ ಕಣ್ಣಿನ ಶಸ್ತ್ರ ಚಿಕಿತ್ಸೆ ಅಭಿಯಾನ ನಡೆಸಲಾಗಿದೆ. ನಾಗರಿಕರಿಗೆ ಈ ಸೌಲಭ್ಯ ಒದಗಿಸಿಕೊಡುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ ಎಂದರು.
ಈ ಬೃಹತ್ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಇಲಾಖೆಗಳ ಅಧಿಕಾರಿಗಳಿಗೆ, ವೈದ್ಯರಿಗೆ ಹಾಗೂ ತಾಲೂಕು ಆಸ್ಪತ್ರೆಯ ಇತರೆ ಸಿಬ್ಬಂದಿಗಳಿಗೆ ನಾನು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುವುದರ ಜೊತೆಗೆ ನಾಗರಿಕರಿಗೆ ಹಾಗೂ ಅಗತ್ಯವಿರುವವರಿಗೆ ನೆರವಾಗಲು ವೈದ್ಯಕೀಯ ತಂಡ ಅವಿರತ ಶ್ರಮವಹಿಸುವಂತೆ ಕೋರಿದ್ದೇನೆ ಎಂದು ಸಚಿವರು ಹೇಳಿದ್ದಾರೆ.