ಕಲಬುರಗಿ | ದೇಶಿ ಭಾಷೆಯಲ್ಲಿ ಉನ್ನತ ಶಿಕ್ಷಣ ನೀಡಿದ ದೇಶದ ಮೊದಲ ದೊರೆಗಳು ನಿಜಾಮರು : ಬೋಡೆ ರಿಯಾಝ್ ಅಹ್ಮದ್

ಕಲಬುರಗಿ : ಹೈದರಾಬಾದ್ ಕರ್ನಾಟಕದ ನಿಝಾಮರು ದೇಶದಲ್ಲೇ ಮೊದಲ ಬಾರಿಗೆ ದೇಶೀ ಭಾಷೆಯಲ್ಲಿ ಉನ್ನತ ಶಿಕ್ಷಣ ನೀಡಿದ ದೊರೆಗಳಾಗಿದ್ದಾರೆ ಎಂದು ನಾಡಿನ ಖ್ಯಾತ ಅನುವಾದಕರು, ಸಂಶೋಧಕರೂ ಆಗಿರುವ ಬೋಡೆ ರಿಯಾಝ್ ಅಹ್ಮದ್ ಹೇಳಿದ್ದಾರೆ.
ಕಡಗಾಂಚಿ ಸಮೀಪದಲ್ಲಿರುವ ಸಿಯಕೆಯಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿಯ ಮತ್ತು ಕನ್ನಡ ವಿಭಾಗ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ, ಕಲಬುರಗಿ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ‘ಹೈದರಾಬಾದ್ ಸಂಸ್ಥಾನದ ಸಾಂಸ್ಕೃತಿಕ ಪರಂಪರೆ’ ಎಂಬ ವಿಷಯದ ಮೇಲಿನ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು.
ಹೈದರಾಬಾದ್ ಸಂಸ್ಥಾನದ ಶೈಕ್ಷಣಿಕ ಕೊಡುಗೆಗಳು ಅನುಪಮವಾದುದು ಎಂದ ಅವರು, ಅವುಗಳನ್ನು ರಾಜಕೀಯ ಕಣ್ಣೋಟದ ಹೊರಗಡೆ ನಿಂತು ನೋಡಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಈ ಹೊತ್ತಿನ ಸಂದರ್ಭಕ್ಕಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹೈದರಾಬಾದ್ ಸಂಸ್ಥಾನ ಶೈಕ್ಷಣಿಕ ಕೊಡುಗೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಕ್ರಿ.ಶ 1724ರಲ್ಲಿ ಸ್ಥಾಪಿತವಾದ ಆಸಿಫ್ ಝಾಹಿ ಸಂಸ್ಥಾನದ 6ನೆಯ ಮತ್ತು 7ನೆಯ ದೊರೆಗಳಾದ ಮೀರ ಮಹಬೂಬ್ ಅಲಿ ಖಾನ್ ಮತ್ತು ಮೀರ್ ಉಸ್ಮಾನ್ ಅಲಿ ಖಾನ್ ಇವರ ಆಡಳಿತದ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ದೊರೆತು, ಹಲವು ಬದಲಾವಣೆ ಹಾಗೂ ಸುಧಾರಣೆಗಳಿಗೆ ಸಂಸ್ಥಾನ ನಾಂದಿಯಾಯಿತು ಎಂದರು.
ಕ್ರಿ.ಶ.1888ರಲ್ಲಿ ಆರಂಭವಾದ ದಾಯರತುಲ್ ಮಆರಿಫ್ ಎಂಬ ಸಂಸ್ಥೆಯಿಂದಾಗಿ ಜಗತ್ತಿನ ಅಪರೂಪದ ಹಾಗೂ ಪ್ರಮುಖವಾದ ಅರಬ್ಬೀ ಮತ್ತು ಫಾರ್ಸಿ ಭಾಷೆಯ ಪ್ರಾಚೀನ ಹಸ್ತಪ್ರತಿಗಳ ಅನ್ವೇಷಣೆ, ರಕ್ಷಣೆ, ಸಂಗ್ರಹಣೆ ಮತ್ತು ಪ್ರಕಟನೆ ಇಲ್ಲಿ ಆಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಜಯದೇವಿ ಜಂಗಮಶೆಟ್ಟಿ ವಹಿಸಿದ್ದರು. ಡಾ. ಬಸವರಾಜ ಬಾಗಾ ಹಾಗೂ ಸಂತೋಷಿ ಹರವಾಳ ಉಪಸ್ಥಿತರಿದ್ದರು.