ಕಲಬುರಗಿ: ನಿಲ್ದಾಣದಲ್ಲೇ ಬಾಕಿಯಾದ ರೈಲು; ಆಕ್ರೋಶಗೊಂಡ ಪ್ರಯಾಣಿಕರು

Update: 2023-08-11 10:16 GMT

ಕಲಬುರಗಿ: ಎರಡು ಗಂಟೆ ಕಳೆದರೂ ರೈಲು ಹೊರಡದ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲು ಚಾಲಕನ ಜೊತೆ ವಾಗ್ವಾದ ನಡೆಸಿದ ಘಟನೆ ಶುಕ್ರವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ವಾಡಿ ರೈಲು ನಿಲ್ದಾಣದಿಂದ ಶುಕ್ರವಾರ 9.45 ಕ್ಕೆ ಹೊರಡಬೇಕಿದ್ದ ರಾಯಚೂರು ವಿಜಯಪುರ ಪ್ಯಾಸೆಂಜರ್ ರೈಲು, ತನ್ನ ನಿಗದಿತ ಸಮಯಕ್ಕೆ ವಾಡಿ ನಿಲ್ದಾಣ ತಲುಪಿತ್ತಾದರೂ ಎರಡು ತಾಸು ಸಮಯ ಕಳೆದರೂನಿಲ್ದಾಣದಿಂದ ಹೊರಡಿರಲಿಲ್ಲ ಎನ್ನಲಾಗಿದೆ.

ಕಲಬುರ್ಗಿ, ವಿಜಯಪುರ, ಸೊಲ್ಲಾಪುರ, ಹೀಗೆ ಹಲವಿ ಕಡೆಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಟಿಕೆಟ್ ಪಡೆದು ಬೋಗಿಗಳಲ್ಲಿ ಕುಳಿತಿದ್ದರು. ಈ ವೇಳೆ ಆಕ್ರೋಶಗೊಂಡ ಕೆಲ ಪ್ರಯಾಣಿಕರು ರೈಲು ಹೊರಡುತ್ತೋ ಇಲ್ವೋ ಸ್ಪಷ್ಟಪಡಿಸಿ ಎಂದು ಚಾಲಕನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿದ ರೈಲು ಚಾಲಕ, ಕೆಂಪು ಸಿಗ್ನಲ್ ತೆಗೆದು ಹಸಿರು ಅಥವಾ ಹಳದಿ ಸಿಗ್ನಲ್ ಬೆಳಗಿದರೆ ನಾನು ಹೊರಡುತ್ತೇನೆ. ನೀವು ನನ್ನ ಜೊತೆ ವಾಗ್ವಾದ ಮಾಡುವ ಬದಲು ರೈಲ್ವೆ ಸ್ಟೇಷನ್ ಮ್ಯಾನೇಜರ್ ಜೊತೆ ಮಾತನಾಡಿ ಎಂದು ಹೇಳಿದ್ದಾರೆ.

ಕೂಡಲೇ ಪ್ರಯಾಣಿಕರ ಆಕ್ರೋಶ ಅರಿತ ರೈಲ್ವೆ ಅಧಿಕಾರಿಗಳು ಹಳದಿ ಸಿಗ್ನಲ್ ಕೊಟ್ಟು ರೈಲು ಹೊರಡಲು ಅನುಕೂಲ ಮಾಡಿಕೊಟ್ಟರು. ಟಿಕೆಟ್ ಪಡೆದರೂ ಪ್ಯಾಸೆಂಜರ್ ರೈಲುಗಳು ನಿಗದಿತ ಸಮಯಕ್ಕೆ ಹೊರಡದೆ ಪ್ರಯಾಣಿಕರ ಸಮಯ ಹಾಳು ಮಾಡುತ್ತಿವೆ. ರೈಲ್ವೆ ಇಲಾಖೆ ಇತ್ತೀಚೆಗೆ ಪ್ಯಾಸೆಂಜರ್ ರೈಲು ಪ್ರಯಾಣಿಕರನ್ನು ಕೀಳಾಗಿ ಕಾಣಲು ಶುರುಮಾಡಿದೆ. ಇಲಾಖೆಗೆ ಬಿಸಿ ಮುಟ್ಟಿಸುವ ಹೋರಾಟಗಳ ಅಗತ್ಯವಿದೆ ಎಂದು ಪ್ರಯಾಣಿಕರು ಸಿಟ್ಟಾಗಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News