ಕಲಬುರಗಿ: ಬಸವಣ್ಣನ ಪ್ರತಿಮೆಗೆ ಅವಮಾನ ಖಂಡಿಸಿ ಕಾಳಗಿ ಬಂದ್ ಯಶಸ್ವಿ

Update: 2025-01-22 18:28 IST
ಕಲಬುರಗಿ: ಬಸವಣ್ಣನ ಪ್ರತಿಮೆಗೆ ಅವಮಾನ ಖಂಡಿಸಿ ಕಾಳಗಿ ಬಂದ್ ಯಶಸ್ವಿ
  • whatsapp icon

ಕಲಬುರಗಿ: ಬೀದ‌ರ್ ಜಿಲ್ಲೆ ಭಾಲ್ಕಿ ತಾಲೂಕಿನ ದಗಡಿ ಗ್ರಾಮದಲ್ಲಿ ಬಸವೇಶ್ವರ ಪ್ರತಿಮೆಗೆ ಧ್ವಂಸ ಮಾಡಿರುವ ಘಟನೆ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಅಪ್ರಾಪ್ತ ಬಾಲಕಿ ಸಾವು ಖಂಡಿಸಿ ವೀರಶೈವ ಲಿಂಗಾಯತ ಸಮಾಜ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡ ಕಾಳಗಿ ಬಂದ್ ಯಶಸ್ವಿಯಾಯಿತು.

ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿಭಟನಕಾರರು ರಸ್ತೆಗಿಳಿದು ಹಳೆ ಬಸ್‌ ನಿಲ್ದಾಣ, ಅಂಬೇಡ್ಕರ್ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಬಸ್ ಮತ್ತಿತರ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಹಳೆ-ಹೊಸ ಬಸ್‌ ನಿಲ್ದಾಣ, ಮುಖ್ಯಬಜಾರ್ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದವು.

ಕಾಳಗಿಯಿಂದ ಕಲಬುರಗಿ, ಚಿಂಚೋಳಿ ಮಾರ್ಗದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.

ಪಟ್ಟಣದ ಮುಖ್ಯಬಜಾರ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯೂ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಜರುಗಿತು. ನಂತರ ಕಲಬುರಗಿ ಚಿಂಚೋಳಿ ರಾಜ್ಯ ಹೆದ್ದಾರಿ ತಡೆದು ಕಾಳಗಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು, ಬಸವಣ್ಣನವರು ಸಮಾನತೆ, ಸಹೋದರತ್ವದ ಸಂದೇಶ ನೀಡಿದ್ದಾರೆ. ಆದ್ದರಿಂದ ಶಾಂತಿಯುತವಾಗಿ ಹೋರಾಟ ನಡೆಸಲಾಗುತ್ತಿದೆ. ಅಂಥ ಗುರುವಿನ ಪ್ರತಿಮೆಗೆ ಹಾನಿ ಮಾಡುವುದೆಂದರೆ ಮಾನವೀಯತೆಗೆ ಅವಮಾನ ಮಾಡಿದಂತೆ. ಬಸವೇಶ್ವರರ ತತ್ವ ಸಿದ್ಧಾಂತ ಎಲ್ಲರಿಗೂ ಮಾದರಿ. ಆದರೆ, ಅಪರಾಧಿಗಳು ಮಹಾನ್ ವ್ಯಕ್ತಿತ್ವವನ್ನು ಅಗೌರವಿಸಲು ಪ್ರಯತ್ನಿಸಿದರು. ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.

ವೀರಶೈವ ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಲು ಯತ್ನಿಸುತ್ತಿರುವ ದುಷ್ಕರ್ಮಿಗಳ ವಿರುದ್ಧ ರಾಜ್ಯ ಸರ್ಕಾರ ಕಬ್ಬಿಣದ ಕಡಲೆಯಾಗಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಪ್ರತಿಮೆ ವಿರೂಪಗೊಳಿಸಿದ ಆರೋಪಿಗಳನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು' ಎಂದು ಎಚ್ಚರಿಸಿದರು.

ಹಾಗೆಯೇ ಜಿಲ್ಲೆಯ ಜೇವರ್ಗಿಯಲ್ಲಿ ಅಪ್ರಾಪ್ತ ಬಾಲಕಿಯ ಪ್ರಾಣಕ್ಕೆ ಕುತ್ತು ತಂದ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು. ಆದರೆ ಆತನನ್ನು ಅಪ್ರಾಪ್ತ ಎಂದು ಬಿಂಬಿಸಲು ಸತತ ಪ್ರಯತ್ನಗಳು ನಡೆದಿವೆ. ಇಂತಹ ಕ್ರಮವನ್ನು ವೀರಶೈವ ಲಿಂಗಾಯತ ಸಮಾಜ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಅವರನ್ನು ಕೂಡಲೇ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.

ನಂತರ ತಹಶಿಲ್ದಾರ ಘಮಾವತಿ ರಾಠೋಡ ಮುಖಾಂತರ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಮಂಗಲಗಿ ಪೂಜ್ಯ ಡಾ. ಶಾಂತ ಸೋಮನಾಥ ಶಿವಾಚಾರ್ಯರು, ಕೋಡ್ಲಿ ಪೂಜ್ಯ ಬಸವಲಿಂಗ ಶಿವಾಚಾರ್ಯರು, ರಟಕಲ್ ರೇವಣಸಿದ್ಧ ಶರಣರು,

ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಜಗಧೀಶ್ ಮಾಲಿಪಾಟೀಲ, ಹಿಂದೂ ಜಾಗೃತ ಸೇನೆ ತಾಲೂಕಾಧ್ಯಕ್ಷ ಶಂಕರ ಚೌಕಾ, ಮುಖಂಡರಾದ ದಿವ್ಯಾ ಹಾಗರಗಿ, ಮಲ್ಲಿನಾಥ ಪಾಟೀಲ‌ ಕಾಳಗಿ, ಶಿವರಾಜ್ ಪಾಟೀಲ ಕಲಗುರ್ತಿ, ಶರಣು ಮಜ್ಜಿಗೆ, ಶರಣು ಪಾಟೀಲ ಮೊತಕಪಳ್ಳಿ, ವೀರಣ್ಣ ಗಂಗಾಣಿ, ವಿಜಯಕುಮಾರ್ ಚೆಂಗಟಿ, ಶಿವರಾಜ್ ಪಾಟೀಲ ಗೊಣಗಿ, ಶಿವಕುಮಾರ್ ಕೊಡಸಾಲಿ, ಕಾಳಶೆಟ್ಟಿ ಪಡಶೆಟ್ಟಿ, ಚಂದ್ರಶೆಟ್ಟಿ ಮಾನಶೆಟ್ಟಿ, ಅಮೃತರಾವ ಪಾಟೀಲ್, ರೇವಣಸಿದ್ಧ ಕಲಶೆಟ್ಟಿ, ರಾಜಶೇಖರ ಗುಡದಾ, ನಾಗರಾಜ ಚಿಕ್ಕಮಠ, ನಾಗರಾಜ ಬೇವಿನಕರ್, ಸೋಮಶೇಖರ್ ಮಾಕಪನೋರ, ಸಂತೋಷ ಹೊಸ್ಸಳ್ಳಿ, ಮಂಜುನಾಥ ಭೇರನ್ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಹಾಗೂ ಬಸವ ಅಭಿಮಾನಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News