ರಷ್ಯಾಗಡಿಯಲ್ಲಿ ಸಿಲುಕಿದ ಕಲಬುರಗಿ ಯುವಕರ ಬಿಡುಗಡೆಗೆ ವಿದೇಶಾಂಗ ಸಚಿವರ ನಿರ್ದೇಶನ : ಸಂಸದ ಜಾಧವ್

Update: 2024-02-28 19:09 GMT

ಕಲಬುರಗಿ : ರಷ್ಯಾ- ಉಕ್ರೇನ್ ಗಡಿಯಲ್ಲಿ ಯುದ್ಧಕ್ಕೆ ನಿಯೋಜಿಸಿ ಅತಂತ್ರವಾಗಿರುವ ಕಲಬುರಗಿಯ ಮೂವರು ಸೇರಿದಂತೆ ಒಟ್ಟು ಆರು ಮಂದಿ ಯುವಕರ ಬಿಡುಗಡೆಗೆ ಕೇಂದ್ರ ವಿದೇಶಾಂಗ ಸಚಿವರಾದ ಜೈ ಶಂಕರ್ ಅವರ ನಿರ್ದೇಶನದಂತೆ ಭಾರತೀಯ ರಾಯಭಾರಿ ಕಚೇರಿ ರಷ್ಯಾ ರಾಜತಾಂತ್ರಿಕರ ಜೊತೆ ಮಾತುಕತೆ ಪ್ರಗತಿಯಲ್ಲಿದ್ದು, ಶೀಘ್ರ ಭಾರತಕ್ಕೆ ವಾಪಸಾಗುವರು ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.

ಇಂದು ಸಂಸದರ ಗೃಹ ಕಚೇರಿಯಲ್ಲಿ ಸಂತ್ರಸ್ತ ಯುವಕರ ಪಾಲಕರ ಜೊತೆ ಮಾತನಾಡಿದ ಜಾಧವ್,  ಕುಟುಂಬಕ್ಕೆ ಸಾಂತ್ವನ ಹೇಳಿದರು. ದಿಲ್ಲಿಯಲ್ಲಿ ವಿದೇಶಾಂಗ ಖಾತೆಯ ಹೆಚ್ಚುವರಿ ಕಾರ್ಯದರ್ಶಿ ಚರಣ್ ಜಿತ್ ಸಿಂಗ್ ಅವರು ರಷ್ಯಾದಲ್ಲಿ ವಿದೇಶಾಂಗ ರಾಜತಾಂತ್ರಿಕ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಬಿಡುಗಡೆ ಪ್ರಕ್ರಿಯೆ ಚುರುಕುಗೊಂಡಿದೆ. ರಷ್ಯಾದ ಅಧಿಕಾರಿಗಳು ಉತ್ತಮ ಸ್ಪಂದನೆ ನೀಡಿದ್ದು, ಶೀಘ್ರದಲ್ಲಿ ಆರೂ ಮಂದಿ ತಾಯ್ನಾಡಿಗೆ ವಾಪಸ್ ಆಗುವ ಮಾಹಿತಿ ನೀಡಿರುವುದಾಗಿ ಜಾಧವ್ ತಿಳಿಸಿದರು.

ಭಾರತದಲ್ಲಿರುವ ರಷ್ಯಾ ರಾಯಭಾರಿ ಕಚೇರಿಯ ಜೊತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದೇನೆ. ಯಾವುದೇ ಕ್ಷಣದಲ್ಲೂ ಬಿಡುಗಡೆ ಮಾಹಿತಿ ಲಭ್ಯವಾಗಲಿದೆ. ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಮುಹಮ್ಮದ್ ಸಮೀರ್, ಸೈಯದ್ ಇಲ್ಯಾಸ್ ಹುಸೇನಿ ಮತ್ತು ಅಬ್ದುಲ್ ನಯೀಮ್ ಇವರ ಪೋಷಕರಿಗೆ ಜಾಧವ್ ಭರವಸೆ ನೀಡಿದರು.

ನಕಲಿ ಏಜೆಂಟರುಗಳು ನಿರುದ್ಯೋಗಿ ಯುವಕರನ್ನು ಕೇಂದ್ರೀಕರಿಸಿ ಉದ್ಯೋಗದ ಆಮಿಷ ಒಡ್ಡಿ ಮೋಸದ ಜಾಲಕ್ಕೆ ಸಿಲುಕಿಸುವ ಮತ್ತು ಬಡ ಯುವಕರನ್ನು ಇಂತಹ ಭೀಕರ ಯುದ್ಧ ಪ್ರದೇಶಗಳಿಗೆ ಕಳುಹಿಸುವ ಮೋಸದ ಜಾಲವನ್ನು ಭೇದಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೂಡ ಒತ್ತಾಯಿಸಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News