ಪ್ರಿಯಾಂಕ್ ಖರ್ಗೆ ಆಕಾಶದಲ್ಲಿ ಚಂದ್ರನಿದ್ದಂತೆ : ರೇವೂ ನಾಯಕ ಬೆಳಮಗಿ
ಕಲಬುರಗಿ : ಸಚಿವ ಪ್ರಿಯಾಂಕ್ ಖರ್ಗೆ ಅವರು ಆಕಾಶದಲ್ಲಿ ಚಂದ್ರನಿದ್ದಂತೆ, ಮಣ್ಣು ಎಸೆದರೆ ಚಂದ್ರನಿಗೆ ಹೇಗೆ ಹತ್ತುವುದಿಲ್ಲ, ಹಾಗೇನೆ ಬಿಜೆಪಿಗರು ಏನೇ ಮಾಡಿದರೂ ಅವರ ಹೆಸರಿಗೆ ಮಸಿ ಬಳಿಯಲು ಆಗುವುದಿಲ್ಲ ಎಂದು ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ನ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಗರು ಪ್ರಿಯಾಂಕ್ ಖರ್ಗೆ ಅವರ ಮೇಲೆ ಹಲವು ಆರೋಪಗಳನ್ನು ಮಾಡಿ, ಅವರ ಹೆಸರಿಗೆ ಕಪ್ಪು ಮಸಿ ಎಳೆಯುವಂತೆ ಪ್ರಯತ್ನಿಸುತ್ತಿದ್ದಾರೆ, ಈ ಭಾಗದಲ್ಲಿ ಒಬ್ಬ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮುತ್ತಿರುವುದು ಬಿಜೆಪಿ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿ ಸುಳ್ಳು ನೆಪವನ್ನು ಇಟ್ಟುಕೊಂಡು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆಂದು ಆರೋಪಿಸಿದರು.
ಈ ಮೊದಲು ಈಶ್ವರಪ್ಪ ಅವರ ಪ್ರಕರಣದಲ್ಲಿ ಮುಖ್ಯವಾಗಿ ಅವರ ಹೆಸರು ಇತ್ತು. ಹಾಗಾಗಿ ಅವರು ರಾಜೀನಾಮೆ ಕೊಡಬೇಕಾಯಿತು. ಆದರೆ ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರು ಉಲ್ಲೇಖಿಸಿಲ್ಲ, ಬದಲಾಗಿ ಆಪ್ತರು ಎಂದು ಹೇಳಲಾಗಿದೆ. ಆಪ್ತರೆಂದರೆ ನಾವು, ನೀವು ಉಳಿದ ಮುಖಂಡರು ಬರುತ್ತಾರೆ. ಹಾಗಾಗಿ ಈ ಪ್ರಕರಣಕ್ಕೆ ಮತ್ತು ಸಚಿವರಿಗೆ ಯಾವುದೇ ಸಂಬಂಧವಿರುವುದಿಲ್ಲ ಎಂದು ತಿಳಿಸಿದರು.
ಈ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕೂಡ ಹೀಗೆ ವೈಯಕ್ತಿಕ ದ್ವೇಷ ಇಟ್ಟುಕೊಂಡು ಗುರಿಯಾಗಿಸಿ, ಜೈಲಿಗೆ ಕಳುಹಿಸಿದ್ದರು ಇದೇ ಬಿಜೆಪಿಗರು. ಡಿಕೆಶಿ ಅವರು ಬ್ಯುಸಿನೆಸ್ ಮಾಡಿಕೊಂಡು ಮೇಲಕ್ಕೆ ಬಂದಿರೋದರಿಂದ ಬಿಜೆಪಿಗರು ಸೇಡಿನ ರಾಜಕಾರಣ ಮಾಡಿದ್ದರು ಎಂದರು.
ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುಭಾಷ್ ರಾಠೋಡ್ ಮಾತನಾಡಿ, ಸಚಿನ್ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟ. ಇದು ಆಗಬಾರದಿತ್ತು. ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದರು.
ನ್ಯಾಯಯುತವಾಗಿ ಹೋರಾಟಕ್ಕೆ ಇಳಿದರೆ ನಾವು ಬೆಂಬಲಿಸುತ್ತೇವೆ. ಆದರೆ ಇದನ್ನೇ ಮುಂದಿಟ್ಟುಕೊಂಡು ಬಿಜೆಪಿಗರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸರಿಯಲ್ಲ, ಇದನ್ನು ಖಂಡಿಸುತ್ತೇವೆ ಎಂದ ಅವರು, ನಮ್ಮ ಬಂಜಾರ ಸಮುದಾಯವು ಪ್ರಿಯಾಂಕ್ ಖರ್ಗೆ ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ವಿಠ್ಠಲ್ ಜಾಧವ್ ಮಾತನಾಡಿ, ದಲಿತ ನಾಯಕರೊಬ್ಬರು ಮುಂದೆ ಬರುತ್ತಿದ್ದಾರೆಂದು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ, ಅದಕ್ಕೆ ಸುಖಾ ಸುಮ್ಮನೆ ಖರ್ಗೆ ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ ಅವರ ಹೆಸರಿಗೆ ಕಳಂಕ ತರಲು ಬಿಜೆಪಿಗರು ಷಡ್ಯಂತ್ರ ರೂಪಿಸುತ್ತಿದ್ದಾರೆ, ಹಾಗಾಗಿ ಏನೇ ಆದರೂ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅರವಿಂದ ಚವ್ಹಾಣ, ಪ್ರೇಮಕುಮಾರ್ ರಾಠೋಡ್ ಮತ್ತು ಪ್ರದೀಪ್ ರಾಠೋಡ್ ಇದ್ದರು.