ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರೆಸ್ಸೆಸ್ ಸಭೆ: ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಬೆದರಿಕೆ; ಆರೋಪ
ಕಲಬುರಗಿ: ಇಲ್ಲಿನ ಆಳಂದ ತಾಲ್ಲೂಕಿನ ಕಡಗಂಚಿ ಕೇಂದ್ರೀಯ ವಿಶ್ವ ವಿದ್ಯಾಲಯಲ್ಲಿ ಆರೆಸ್ಸೆಸ್ ಗೆ ಸಂಬಂಧಿಸಿದ ಕಾರ್ಯಕ್ರಮ ಬಹಿರಂಗವಾಗಿ ನಡೆಯುತ್ತಿದ್ದು ಈ ಬಗ್ಗೆ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನು ವಿವಿಧ ರೀತಿಯಲ್ಲಿ ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳು ಮತ್ತೆ ಕೇಳಿ ಬಂದಿದೆ.
ಜುಲೈ 18 ಗುರುವಾರದಂದು ವಿಶ್ವ ವಿದ್ಯಾಲಯದ ಅತಿಥಿ ಗೃಹದಲ್ಲಿ ಆರೆಸ್ಸೆಸ್ ಗೆ ಸಂಬಂಧಿಸಿದ ಕಾರ್ಯಕ್ರವೊಂದು ಜರುಗಿದೆ ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ಕುಲಸಚಿವ ಆರ್.ಆರ್. ಬಿರಾದಾರ್, ಶೈಕ್ಷಣಿಕ ನಿರ್ದೇಶಕ ಪ್ರೊ. ಬಸವಾರಾಜ್ ಡೋಣೂರ್, ವಿಶ್ವವಿದ್ಯಾಲಯದ ಅಭಿವೃದ್ಧಿ ಅಧಿಕಾರಿ ಪ್ರೊ. ಚನ್ನವೀರಯ್ಯ, ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಕುಬಕಡ್ಡಿ , ಚೀಫ್ ವಾರ್ಡನ್ ಡಾ. ಬಸವಾರಾಜ್ ಸೋಮನಮರಡಿ, ವಿಶ್ವವಿದ್ಯಾಲಯದ ಶಿಸ್ತು ಪಾಲನಾ ಅಧಿಕಾರಿ ವೆಂಕಟರಮಣ ದೊಡ್ಡಿ, ಪರೀಕ್ಷಾ ಮುಖ್ಯ ಅಧಿಕಾರಿಗಳು ಹಾಗೂ ಪ್ರಾಧ್ಯಾಪಕರು ಪಾಲ್ಗೊಂಡು ಭಗವಾಧ್ವಜಕ್ಕೆ ನಮಿಸಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ಪಿ. ಅವರು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಆರೋಪ ಮಾಡಿದ್ದು, ಇದಕ್ಕೆ ಬೆದರಿಕೆ ಕರೆಗಳು ಬಂದಿವೆ ಎಂದು ತಿಳಿಸಿದ್ದಾರೆ.
ಆರೆಸ್ಸೆಸ್ ನ 100ನೇ ವರ್ಷಾಚರಣೆ ನಿಮಿತ್ತ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಿದ್ದಾರೆ. ಕಾರ್ಯಕ್ರಮಕ್ಕೆ ನಾಗಪುರದಿಂದ ಆಗಮಿಸಿದ್ದವರಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಕೆಲವರು, ವಿಶ್ವವಿದ್ಯಾಲಯ ಆರೆಸ್ಸೆಸ್ ಕೇಂದ್ರ ಎನ್ನುವುದನ್ನು ಪದೇ ಪದೇ ಗುರುತಿಸುವ ಅಗತ್ಯವಿಲ್ಲ. ಇದು ಆರೆಸ್ಸೆಸ್ ನ ಕೇಂದ್ರವೇ. ಭಗವಾ ಧ್ವಜಕ್ಕೆ ನೀವು ಸದಾ ನಮಿಸಬೇಕು. ಅದನ್ನು ಗೌರವಿಸಬೇಕು ಎಂದಿದ್ದಾರೆ. ಎಡ ಪಂಥೀಯರು ಇಲ್ಲಿ ಧ್ವನಿಯೆತ್ತಿದರೆ ಅವರನ್ನು ಯಾವ ರೀತಿ ಸದ್ದಡಗಿಸಬೇಕು ಎಂದು ನಾವು ಈ ಹಿಂದೆ ಹೇಳಿದ್ದೇವೆ. ಅದರಂತೆ ನೀವು ನಡೆದುಕೊಂಡಿದ್ದೀರಿ ಎಂದು ಭಾಷಣದಲ್ಲಿ ಪ್ರಶಂಸಿದ್ದಾಗಿ ನಂದಕುಮಾರ್ ಅವರು ಹೇಳಿದ್ದಾರೆ.
ಇದು ಒಳ್ಳೆಯ ಬೆಳವಣಿಗೆ. ಇದರಿಂದ ಎಡ ಪಂಥೀಯರಿಗೆ ಒಂದಿಷ್ಟು ಭಯ ಬಂದಿದೆ. ನಿಮ್ಮ ಪ್ರತಿರೋಧವನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕೇಂದ್ರದಲ್ಲಿ ನಮ್ಮ ಸರ್ಕಾರ ಇಲ್ಲ ಎಂಬ ಭಾವನೆ ಅವರಿಗೆ ಬಂದಿದೆ. ಒಂದು ರೀತಿಯಲ್ಲಿ ಜಾಸ್ತಿ ಗೆದ್ದಿದ್ದೇವಿ ಎನ್ನುವ ಉತ್ಸಾಹದಲ್ಲಿದ್ದಾರೆ. ಸಂವಿಧಾನ ಅಂತೆಲ್ಲ ಹೇಳುತ್ತಿದ್ದಾರೆ. ಹಾಗೇನೂ ಇಲ್ಲ, ಯಾರು ಬಂದರೂ, ನಮ್ಮದೇ ಆರೆಸ್ಸೆಸ್ ಪರವಾದ ಸರ್ಕಾರ ನಡೆಯುವುದು. ನೀವು ಆರೆಸ್ಸೆಸ್ ನ ಸಿದ್ದಾಂತಗಳನ್ನು ಎಷ್ಟು ಆಗುತ್ತೋ ಅಷ್ಟು ಅನುಷ್ಠಾನಗೊಳಿಸಿ. ಯಾರಾದರೂ ಪ್ರಾಧ್ಯಾಪಕರು ವಿರುದ್ದವಾಗಿ ನಡೆದುಕೊಂಡರೆ, ಅವರಿಗೆ ಮುಲಾಜಿಲ್ಲದೆ ನೋಟಿಸ್ ಕೊಡಿ. ವಿದ್ಯಾರ್ಥಿಗಳು ಪ್ರಶ್ನಿಸಿದರೆ, ಅವರ ಧ್ವನಿ ಅಡಗಿಸಿ. ಅದೂ ಆಗಿಲ್ಲ ಅಂದರೆ, ಬೇರೆ ರೀತಿಯ ಕ್ರಮ (ಪೊಲೀಸ್ ಗೆ ದೂರು ಇತ್ಯಾದಿ) ಕೈಗೊಳ್ಳಿ. ಇಲ್ಲಿ ಯಾರೇ ಸಚಿವ, ಸಂಸದ ಆದರೂ ನೀವು ಚಿಂತೆ ಮಾಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾಗಿ ನಂದಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸಂಶೋಧನಾ ವಿದ್ಯಾರ್ಥಿಗಳ ಮೇಲೆ ನರೇಂದ್ರ ದರಿಯಾ ಹಾಗೂ ರೋಹಿತ್ ಜೋಶಿ (ಬಸವರಾಜ್ ಡೋಣೂರ್ ಅವರ ಶಿಷ್ಯ) ಕೂಡಿಕೊಂಡು ಹಲ್ಲೆಗೆ ಮುಂದಾಗಿದ್ದಲ್ಲದೆ, ಮೊಬೈಲ್ ಕಸಿದುಕೊಂಡು “ವಿಡಿಯೋ ಡಿಲೀಟ್ ಮಾಡು ಇಲ್ಲವಾದರೆ ಪರಿಣಾಮ ಸರಿ ಇರುವುದಿಲ್ಲ”ವೆಂದು ಬೆದರಿಕೆ ಒಡ್ಡಿದ್ದಾರೆ ಎಂದು ನಂದಕುಮಾರ್ ಆರೋಪಿಸಿದ್ದಾರೆ.
ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮ ಕಾನೂನಾತ್ಮಕವಾಗಿದ್ದರೆ, ಸಂವಿಧಾನ ಬದ್ದವಾಗಿದ್ದರೆ ಇಷ್ಟೊಂದು ಭಯದಿಂದ ಕಾರ್ಯಕ್ರಮ ಆಯೋಜನೆ ಮಾಡುವ ಅವಶ್ಯಕತೆ ಏನಿದೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕವಾಗಿ ಏನು ನಡೆಯುತ್ತಿಲ್ಲ. ಕೇವಲ ಆರೆಸ್ಸೆಸ್ ಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತವೆ. ವಿದ್ಯಾರ್ಥಿಗಳು ಆರೆಸ್ಸೆಸ್ ಪರವಾಗಿದ್ದರೆ ಅವರನ್ನು ಸುಲಭವಾಗಿ ಪಾಸ್ ಮಾಡುತ್ತಾರೆ. ಪ್ರಾಧ್ಯಾಪಕರು ಒಬ್ಬ ವಿದ್ಯಾರ್ಥಿಯನ್ನು ಪಾಸ್ ಮಾಡಿದರೆ, ಆತನ ಹಿನ್ನೆಲೆ (ಎಡ ಪಂಥೀಯನೋ, ಬಲ ಪಂಥೀಯನೋ) ತಿಳಿದುಕೊಂಡು ಪರೀಕ್ಷಾ ಮುಖ್ಯ ಅಧಿಕಾರಿಗಳು ಅವರನ್ನು ಫೇಲ್ ಮಾಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ನಮಗೆ ಅಧಿಕಾರವಿದೆ ಎನ್ನುತ್ತಾರೆ. ಆರೆಸ್ಸೆಸ್ ಪರವಾಗಿದ್ದರೆ ವಿದ್ಯಾರ್ಥಿಗಳು ಸಂಶೋಧನೆ ಮಾಡುವ, ತರಗತಿಗೆ ಹಾಜರಾಗುವ ಅಗತ್ಯವಿಲ್ಲ. ಸ್ವತಃ ಗೈಡ್ ಗಳೇ ಮುಂದೆ ನಿಂತು ಕ್ಷೇತ್ರ ಕಾರ್ಯ ಸೇರಿದಂತೆ ಇನ್ನಿತರ ನೆಪದಲ್ಲಿ ನಾಗಪುರಕ್ಕೋ, ಉತ್ತರ ಪ್ರದೇಶಕ್ಕೋ ಆರೆಸ್ಸೆಸ್ ಶಿಬಿರಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಕುಬಕಡ್ಡಿ ಅವರು, ತಮ್ಮ ಪರವಾಗಿರುವ ಅಥವಾ ಆರೆಸ್ಸೆಸ್ ಪರವಾಗಿರುವ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ ಕೊಡುವುದು, ಇತರ ವಿದ್ಯಾರ್ಥಿಗಳನ್ನು ಕಡೆಗಣಿಸುವುದನ್ನು ಮಾಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ವಿದ್ಯಾರ್ಥಿಗಳನ್ನು ಅಮಾನತು ಮಾಡುವುದು, ಪೊಲೀಸ್ ದೂರು ದಾಖಲಿಸುವುದು ಮಾಡುತ್ತಾರೆ ಎಂದು ನಂದಕುಮಾರ್ ಅವರು ದೂರಿದ್ದಾರೆ.
ಕರ್ನಾಟಕಕ್ಕಾಗಿ, ವಿಶೇಷವಾಗಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದರೂ, ಶೇಕಡಾ 75ರಷ್ಟು ಸಿಬ್ಬಂದಿ ಆಂಧ್ರ ಪ್ರದೇಶ ಮೂಲದವರಿದ್ದಾರೆ. ಈ ರೀತಿಯಾದರೆ ಉತ್ತರ ಕರ್ನಾಟಕದವರಿಗೆ ವಿವಿಯಿಂದ ಏನು ಪ್ರಯೋಜನವಾಗಲಿದೆ? ಎಂದು ನಂದಕುಮಾರ್ ಅವರು ಪ್ರಶ್ನಿಸಿದ್ದಾರೆ.
ವಿಶ್ವವಿದ್ಯಲಯದಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮ ನಡೆಸಲು ಅನುಮತಿ ಇಲ್ಲ. ಆದರೆ, ಇಲ್ಲಿ ಆರೆಸ್ಸೆಸ್ ಗೆ ಅವಕಾಶ ನೀಡಿದ್ದಾರೆ. ಈ ಹಿಂದೊಮ್ಮೆ ಆರೆಸ್ಸೆಸ್ ನ ಸಭೆಯನ್ನು ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಆಯೋಜಿಸಿದ್ದರು. ಈ ವೇಳೆ ನಾವು ಅಂಬೇಡ್ಕರ್ ವಾದ ವಿದ್ಯಾರ್ಥಿ ಸಂಘಟನೆಗೆ ಸಂಬಂಧಿಸಿದ ಸಭೆ ನಡೆಸಲು ಅನುಮತಿ ಕೇಳಿದ್ದೆವು. ಆ ಸಂದರ್ಭದಲ್ಲಿ ಕುಲ ಸಚಿವರು ಆರೆಸ್ಸೆಸ್ ಸಭೆಯನ್ನು ರದ್ದುಪಡಿಸಿದ್ದರು. ಇದಾಗಿ ಅರ್ಧ ಗಂಟೆಯ ಬಳಿಕ ಇತಿಹಾಸ ವಿಭಾಗದ ಮುಖ್ಯಸ್ಥ ರವಿಕುಮಾರ್ ಎಂಬವರು, ಇತಿಹಾಸ ವಿಭಾಗದ ಒಳಗಡೆಯೇ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರು. ಈ ಬಗ್ಗೆ ನಾವು ಕುಲಸಚಿವರನ್ನು ಪ್ರಶ್ನಿಸಿದಾಗ “ಇಲ್ಲ, ಯಾರು ಸಭೆಗೆ ಅನುಮತಿ ಕೊಟ್ಟಿದ್ದಾರೋ ಅವರ ವಿರುದ್ದ ನಾನು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದರು. ಆದರೆ, ಮರುದಿನ ಪ್ರಶ್ನೆ ಮಾಡಿದ್ದ ನಮ್ಮ ಪಿಹೆಚ್ ಡಿ ರದ್ದುಪಡಿಸಿ ವಿಶ್ವವಿದ್ಯಾಲಯ ಪ್ರವೇಶಕ್ಕೆ ತಡೆಯೊಡ್ಡಿದ್ದರು ಎಂದು ನಂದಕುಮಾರ್ ಅವರು ತೀವ್ರ ಅಸಮಾಧಾನ ಹೊರಹಾಕಿದರು.
ವಿಶ್ವವಿದ್ಯಾಲಯದ ಎಲ್ಲ ಆಯ ಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡು ಅಧಿಕಾರದಲ್ಲಿ ಆರೆಸ್ಸೆಸ್ ನ ಮತಾಂಧರೇ ತುಂಬಿದ್ದಾರೆ. ಶರಣರ, ಸೂಫಿ ಸಂತರ, ತತ್ವಪದಕಾರರ ಸೌಹಾರ್ದ ಪರಂಪರೆಯ ನಮ್ಮ ಈ ಭಾಗದ ವಿದ್ಯಾರ್ಥಿಗಳು ಇಂತಹ ಪ್ರಾಧ್ಯಾಪಕರಿಂದ ಏನು ಕಲಿಯುವರು ಎಂಬುವುದನ್ನು ಊಹಿಸಿದರೆ ಆತಂಕವಾಗುತ್ತದೆ. ಹಾಗಾಗಿ, ಈ ವಿಶ್ವವಿದ್ಯಾಲಯಕ್ಕೆ ಆರೆಸ್ಸೆಸ್ ಕೇಂದ್ರೀಯ ಕಚೇರಿ ವಿಶ್ವವಿದ್ಯಾಲಯ ಅಂತ ಹೆಸರು ಇಡುವುದೇ ಸೂಕ್ತ ಎನ್ನಿಸುತ್ತಿದೆ ಎಂದು ನಂದಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.