ಕಲಬುರಗಿ | ಸಾವಿತ್ರಿಬಾಯಿ ಫುಲೆ ಹೋರಾಟದ ಜೀವನ ಎಲ್ಲರಿಗೂ ಆದರ್ಶ: ಡಾ.ರಮೇಶ ಲಂಡನಕರ್
ಕಲಬುರಗಿ : ಮಹಿಳೆಯರನ್ನು ಮೇಲೆತ್ತಬೇಕಾದರೆ ಜ್ಞಾನದ ಅವಶ್ಯಕತೆಯಿದೆ ಎಂದು ಮನಗೊಂಡು ಸಾವಿತ್ರಿಬಾಯಿ ಫುಲೆಯವರು ಮಹಿಳಾ ಶಿಕ್ಷಣಕ್ಕಾಗಿ ಜೀವಮಾನವಿಡಿ ಹೋರಾಡಿದ ರೀತಿಯು ನಮಗೆ ಇಂದಿಗೂ ಆದರ್ಶಮಯ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ರಮೇಶ ಲಂಡನಕರ್ ಹೇಳಿದರು.
ಅವರು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಶಹಾಬಾದ್ ಘಟಕದ ವತಿಯಿಂದ ಶಹಾಬಾದ್ ನಗರದ ಸೇಂಟ್ ಥಾಮಸ್ ಶಾಲೆಯಲ್ಲಿ ಸಾಮಾಜಿಕ ಕ್ರಾಂತಿಯ ಜ್ವಾಲೆ ಭಾರತದ ಮಹಿಳಾ ಶಿಕ್ಷಣದ ರೂವಾರಿಗಳಾದ ಸಾವಿತ್ರಿಬಾಯಿ ಫುಲೆಯವರ 194ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
19ನೇ ಶತಮಾನದಲ್ಲಿ ಇನ್ನು ಭಾರತವೆಂಬ ದೇಶದ ಪರಿಕಲ್ಪನೆಯೇ ಇಲ್ಲದೇ ಇರುವ ಪರಿಸ್ಥಿತಿಯಲ್ಲಿ ಅಂದಿನ ಮಹಾರಾಷ್ಟ್ರದಲ್ಲಿ ಜಾತಿಪದ್ಧತಿಯು ವಿಪರೀತವಾಗಿತ್ತು. ಮೌಢ್ಯ ತುಂಬಿದ ಅಂದಿನ ಸಮಾಜದಲ್ಲಿ ಮಹಿಳೆಯರ ಜೀವನವು ಪ್ರಾಣಿಗಳಿಗಿಂತಲೂ ಘೋರವಾಗಿತ್ತು. ಅದರಲ್ಲಿ ಕೆಳಜಾತಿಯ, ಶೂದ್ರ ಮಹಿಳೆಯರ ಸ್ಥಿತಿಯು ಚಿಂತಾಜನಕವಾಗಿತ್ತು. ಮಹಿಳೆಯರನ್ನು ಮೇಲೆತ್ತಬೇಕಾದರೆ ಜ್ಞಾನದ ಅವಶ್ಯಕತೆಯಿದೆ ಎಂದು ಮನಗೊಂಡು ಸಾವಿತ್ರಿಬಾಯಿ ಫುಲೆಯವರು ಮಹಿಳಾ ಶಿಕ್ಷಣಕ್ಕಾಗಿ ಜೀವಮಾನವಿಡಿ ಹೋರಾಡಿದ ಪರಿಯು ನಮಗೆ ಇಂದಿಗೂ ಆದರ್ಶವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸೇಂಟ್ ಥಾಮಸ್ ಶಾಲೆಯ ಫಾದರ್ ಜೇರಾಲ್ಡ್ ಸಾಗರ, ಕಲಬುರಗಿಯ ನವಜ್ಯೋತಿ ಶಾಲೆಯ ಶಿಕ್ಷಕಿ ಸ್ನೇಹ ಕಟ್ಟಿಮನಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಡಯಟ್ ಕಮಲಾಪೂರನ ಬೋಧಕರಾದ ಎಮ್.ಜಿ.ಸತೀಶ ಮಾತನಾಡಿದರು. ರಾಮಣ್ಣ ಎಸ್.ಇಬ್ರಾಹಿಂಪೂರ ಅಧ್ಯಕ್ಷತೆ ವಹಿಸಿದ್ದರು.