ಕಲಬುರಗಿ | ಕುಡಿದ ನಶೆಯಲ್ಲಿ ತೇಲಾಡಿದ ಸ್ವಾಮೀಜಿ; ವಿಡಿಯೋ ವೈರಲ್
ಕಲಬುರಗಿ: ಸ್ವಾಮೀಜಿಗಳಾಗಿ ಭಕ್ತರಿಗೆ ಹಿತವಚನ ಹೇಳಬೇಕಾಗಿದ್ದ ಸ್ವಾಮೀಜಿಯೊಬ್ಬರು, ಕುಡಿದು ರಸ್ತೆಯಲ್ಲಿ ರಂಪಾಟ ಮಾಡಿ, ನಶೆಯಲ್ಲಿ ತೇಲಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಫಜಲ್ ಪುರ ತಾಲೂಕಿನ ಉಡಚಣ ಗ್ರಾಮದ ಸುಪ್ರಸಿದ್ಧ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಮಠಾಧಿಪತಿ ಶಾಂತಲಿಂಗ ಶಿವಾಚಾರ್ಯರು ಜ.8ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ನಡೆಸಿ, ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನು ನೋಡಿದ ಅಲ್ಲಿನ ಸ್ಥಳೀಯರು, ಸ್ವಾಮೀಜಿಯ ಅವತಾರ ಕಂಡು ವಿಡಿಯೋ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅರ್ಧಂಬರ್ಧ ಬಟ್ಟೆ ಬಿಚ್ಚಿಕೊಂಡು ಅಲೆದಾಡುತ್ತಿದ್ದ ಸ್ವಾಮೀಜಿಗಳಿಗೆ ಸಾರ್ವಜನಿಕರು, ಅವರ ಬಗ್ಗೆ ಮಾಹಿತಿ ಕೇಳಿದಾಗ ಸುಳ್ಳು ಮಾಹಿತಿಯನ್ನು ನೀಡಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಸಾರ್ವಜನಿಕರು ಅವರನ್ನು ಬಿಡದಿದ್ದಾಗ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಉಡಚಣ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ಸಾರ್ವಜನಿಕರಿಗೆ ಸಮಜಾಯಿಸಿ ನೀಡಿ 22 ಸಾವಿರ ರೂ. ದಂಡ ಕಟ್ಟಿ ಅವರನ್ನು ಬಿಡಿಸಿಕೊಂಡು ಬಂದಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಹೊಸ ಮಠಾಧಿಪತಿ ನೇಮಕಕ್ಕೆ ಗ್ರಾಮಸ್ಥರು ನಿರ್ಧಾರ :
ಶಾಂತಲಿಂಗ ಶಿವಾಚಾರ್ಯರ ನಡುವಳಿಕೆಗಳಿಗೆ ಬೇಸತ್ತು ಗ್ರಾಮಸ್ಥರು ಮಠದ ಹೆಸರು ಈಗಿನ ಸ್ವಾಮೀಜಿಗಳು ಹಾಳು ಮಾಡುತ್ತಿದ್ದಾರೆ. ಈ ರೀತಿ ಘಟನೆಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ ಎಂದು ಶಾಸಕ ಎಂ.ವೈ.ಪಾಟೀಲ್ ಅವರನ್ನು ಭೇಟಿಯಾಗಿ ಉಜ್ಜಯಿನಿ ಜಗದ್ಗುರುಗಳ ಬಳಿ ಗ್ರಾಮಸ್ಥರ ನಿಯೋಗ ತೆರಳಿ, ಈ ಸ್ವಾಮೀಜಿಗಳನ್ನು ತೆಗೆದು ಹಾಕಿ ಮಠಕ್ಕೆ ಹೊಸ ಮಠಾಧಿಪತಿ ನೇಮಕ ಮಾಡುವಂತೆ ಮನವಿ ಸಲ್ಲಿಸಲು ಗ್ರಾಮಸ್ಥರು ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.