ಕಲಬುರಗಿ | ಬಸವಣ್ಣನವರ ಕುರಿತಾಗಿ 3 ದಿನ ನಾಟಕೋತ್ಸವ : ಡಾ.ವಿಶ್ವರಾಜ್ ಪಾಟೀಲ್

Update: 2025-01-14 15:29 GMT

ಕಲಬುರಗಿ : ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಕುರಿತಾಗಿ ಇದೇ ಜ.15ರಿಂದ 17ರ ವರೆಗೆ 3 ದಿನಗಳ ಕಾಲ ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ವಿವಿಧ ನಾಟಕಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ನಾಟಕೋತ್ಸವದ ಸಂಚಾಲಕ ಡಾ.ವಿಶ್ವರಾಜ್ ಪಾಟೀಲ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಟಕೋತ್ಸವದ ಉದ್ಘಾಟನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರೂ ಆಗಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜ.15ರಂದು ಸಂಜೆ 6ಗಂಟೆಗೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಿಎಂ ಸಲಹೆಗಾರ, ಆಳಂದ ಶಾಸಕ ವಿ.ಆರ್.ಪಾಟೀಲ್ ಆಗಮಿಸಲಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಅಧ್ಯಕ್ಷತೆ ವಹಿಸುವರು, ಈ ವೇಳೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ.ನಾಗರಾಜ್ ಮೂರ್ತಿ, ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ್ ಹೂಗಾರ್, ನಾಟಕಕಾರ ಮಹಾಂತೇಶ್ ನವಕಲ್ ಉಪಸ್ಥಿತರಿರುವರು ಎಂದರು.

ಜ.15ರಂದು 6.30ಕ್ಕೆ ರಾಷ್ಟ್ರೀಯ ನಾಟಕ ಶಾಲೆ ಅಭಿನಯಿಸುವ ಶಿವರಾತ್ರಿ, ಜ.16 ರಂದು ಸಂಜೆ 6.30ಕ್ಕೆ ರಂಗವೃಕ್ಷ ನಾಟಕ ನೃತ್ಯ ಸೇವಾ ಸಂಘ ಕಲಬುರಗಿ ಅಭಿನಯಿಸುವ ಶರಣ ಸಿಂಚನ ಮತ್ತು ಜ.17ರಂದು ಬಳ್ಳಾರಿಯ ಧಾತ್ರಿ ರಂಗ ಸಂಸ್ಥೆ ಅಭಿನಯಿಸುವ ಮೋಳಿಗೆ ಮಾರಯ್ಯ ಎಂಬ ನಾಟಕಗಳು ಪ್ರದರ್ಶನವಾಗಲಿವೆ ಎಂದು ತಿಳಿಸಿದರು.

ಜ.17ರಂದು ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎಲ್.ಶೇಖ್, ಕೆ.ಲಿಂಗಪ್ಪ, ಶಿವನಾಯಕ ದೊರೆ ಅವರು ಉಪಸ್ಥಿತರಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ರಂಗ ನಿರ್ದೇಶಕ ಶಾಂತಲಿಂಗಯ್ಯ ಮಠಪತಿ, ಕೆ.ಲಿಂಗಪ್ಪ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News