ಕಲಬುರಗಿ | ಬಾಲಕಿ ಆತ್ಮಹತ್ಯೆ ಪ್ರಕರಣ : ನೊಂದ ಕುಟುಂಬಕ್ಕೆ ಶಾಸಕ ಡಾ.ಅಜಯ್ ಸಿಂಗ್ ಸಾಂತ್ವನ

Update: 2025-01-14 15:54 GMT

ಕಲಬುರಗಿ : ಯುವಕನೊಬ್ಬನ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ 8ನೇ ತರಗತಿಯ ಪ್ರೌಢಶಾಲೆಯ ವಿದ್ಯಾರ್ಥಿನಿ, ಜೇವರ್ಗಿ ಪಟ್ಟಣದ ಓಂನಗರದ ನಿವಾಸಿ ಮಹಾಲಕ್ಷ್ಮೀ (14) ಅವರ ಮನೆಗೆ ಜೇವರ್ಗಿ ಶಾಸಕ ಹಾಗೂ ಕೆಕೆಆರ್ ಡಿಬಿ ಅಧ್ಯಕ್ಷರೂ ಆಗಿರುವ ಡಾ.ಅಜಯ್ ಧರ್ಮಸಿಂಗ್ ಭೇಟಿ ನೀಡಿ ಬಾಲಕಿಯ ನೊಂದ ಪೋಷಕರಿಗೆ ಸಾಂತ್ವನ ಹೇಳಿದರು.

ಬಾಲಕಿಯ ತಂದೆ ಯಶವಂತರಾಯ್ ಬಿರಾದಾರ್ ಹಾಗೂ ಮನೆ ಮಂದಿಯೊಂದಿಗೆ ಮಾತುಕತೆ ನಡೆಸಿದ ಶಾಸಕರು ಘಟನೆಯ ಬಗ್ಗೆ ವಿಷಾದಿಸಿದರು. ನಿಮ್ಮ ಸಂಕಷ್ಟದ ಈ ಗಳಿಗೆಯಲ್ಲಿ ಸರಕಾರ ಹಾಗೂ ತಾವು ಜೊತೆಗಿರೋದಾಗಿಯೂ ಭರವಸೆ ನೀಡಿದರು.

ಈ ಘಟನೆಯನ್ನು ತಾವು ಸಿಎಂ ಸಿದ್ದರಾಮಯ್ಯರ ಗಮನಕ್ಕೆ ತಂದು ಚರ್ಚಿಸುವೆ, ಜೊತೆಗೆ ಸರಕಾರದ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ. ವೈಯಕ್ತಿಕವಾಗಿಯೂ ನೆರವು ನೀಡುವುದಾಗಿಯೂ ಡಾ.ಅಜಯ್ ಸಿಂಗ್ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಾಜಶೇಖರ್ ಸೀರಿ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕುಂ ಪಟೇಲ್ ಈಜೇರಿ, ಸೋಮಣ್ಣ ಕಲಾ, ಕಾಶಿರಾಯ್ ಗೌಡ ಯಲಗೋಡ, ಚಂದ್ರಶೇಖರ್ ಹರನಾಳ ಸೇರಿದಂತೆ ಅನೇಕರಿದ್ದರು.

ಯಡ್ರಾಮಿ ಹಾಗೂ ಜೇವರ್ಗಿಯಲ್ಲಿ ಹೈಸ್ಕೂಲ್, ಕಾಲೇಜುಗಳು, ಬಾಲಕಿಯರ ಹಾಸ್ಟೆಲ್ಗಳ ಸುತ್ತಮುತ್ತ ಪೊಲೀಸರು ಮಫ್ತಿಯಲ್ಲಿದ್ದು ಚುಡಾಯಿಸೋದು, ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ದಂಡಿಸಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುವಂತೆ ತಾವು ಸೂಚನೆ ನೀಡಿದ್ದಾಗಿಯೂ ಡಾ.ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News