ಶೋಷಣೆಗೆ ಒಳಗಾದ ಮಹಿಳೆಯರ ಪರ ಬಿಜೆಪಿ ಈಗ ಯಾಕೆ ಧ್ವನಿ ಎತ್ತುತ್ತಿಲ್ಲ? : ಪ್ರಿಯಾಂಕ್ ಖರ್ಗೆ

Update: 2024-04-29 08:42 GMT

ಕಲಬುರಗಿ : ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ‌ ತಂಡವನ್ನು ರಚಿಸಿದ್ದು, ಕಾನೂನು ಪ್ರಕಾರ ತನಿಖೆ ನಡೆಯಲಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೇಂದ್ರ ಸರ್ಕಾರವೇ ಪ್ರಜ್ವಲ್ ಅವರನ್ನು‌ ವಿದೇಶಕ್ಕೆ ಕಳಿಸಿದೆ ಎನ್ನುವ ಮಾತುಗಳಿವೆ. ಈ ಬಗ್ಗೆ ಮೋದಿ‌ ಸೇರಿದಂತೆ ಬಿಜೆಪಿ ನಾಯಕರು ಉತ್ತರಿಸಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ‌ ಅವರು, "ಈ ಪ್ರಕರಣದಲ್ಲಿ ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ಆಗಿದೆ. ಶೋಷಣೆಗೆ ಒಳಗಾದ ಮಹಿಳೆಯರ ಪರ ಬಿಜೆಪಿ ಯಾಕೆ ಧ್ವನಿ ಎತ್ತುತ್ತಿಲ್ಲ?. ಹುಬ್ಬಳ್ಳಿ ಘಟನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿ ಚುನಾವಣೆ ನೀತಿ‌ ಸಂಹಿತೆಯನ್ನು ಲೆಕ್ಕಿಸದೆ ಪ್ರತಿಭಟನೆ ಮಾಡಿದ್ದ ಬಿಜೆಪಿ ನಾಯಕರು ನೊಂದ ಮಹಿಳೆಯರ ಪರ‌ ನ್ಯಾಯಕ್ಕಾಗಿ ಜೆಡಿಎಸ್ ವಿರುದ್ದ ಯಾವಾಗ ಪ್ರತಿಭಟನೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ಸ್ಪರ್ಧಿಸಿದ್ದ ಹಾಸನದಂತಹ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೇಟ್ ನೀಡಬಾರದು. ಅವರ ನಡುವಳಿಕೆ ಸರಿ ಇಲ. ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅಲ್ಲಿನ ಮಾಜಿ ಶಾಸಕರೊಬ್ಬರು ಅಮಿತ್ ಶಾ, ನಡ್ಡಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಅವರಿಗೆ ಪತ್ರ ಬರೆದಿದ್ದರು. ಟಿವಿ ಮಾಧ್ಯಮದ ಮುಂದೆ ಮಾತನಾಡುವಾಗಲೂ ಕೂಡಾ ಕುಮಾರಸ್ವಾಮಿ‌ ಪ್ರಜ್ವಲ್ ಗೆ ಟಿಕೇಟು ನೀಡುವ ವಿಚಾರದಲ್ಲಿ‌ ವಿರೋಧವಿರುವ ಬಗ್ಗೆ ಒಪ್ಪಿಕೊಂಡಿದ್ದರು. ಆದರೂ ಕೂಡಾ ದೇವೆಗೌಡ ಹಾಗೂ ಇಡೀ ಕುಟುಂಬ ಹೋಗಿ ಟಿಕೇಟ್ ಪಡೆದುಕೊಂಡು ಬಂದಿತ್ತು ಎಂದರು..

ಪ್ರಜ್ವಲ್ ಅವರ ಲೈಂಗಿಕ‌‌ ಕಿರುಕುಳ ಬಗ್ಗೆ ಗೊತ್ತಿದ್ದು ಅವರಿಗೆ ಟಿಕೇಟ್ ನೀಡಲಾಗಿದೆ ಎಂದು ಆರೋಪಿಸಿ ಖರ್ಗೆ, ಕೇಂದ್ರದಲ್ಲಿ ತಮ್ಮ ಸರ್ಕಾರವಿದೆ ಹೇಗೂ ಬಚಾವಾಗಬಹುದು ಎನ್ನುವ ಆಲೋಚನೆ ಇದ್ದಿರಬಹುದು. ಈ ಬಗ್ಗೆ ಮೋದಿ, ಅಮಿತ್ ಶಾ, ವಿಜಯೇಂದ್ರ ಹಾಗೂ ಅಶೋಕ್ ಉತ್ತರಿಸಲಿ ಎಂದು ಆಗ್ರಹಿಸಿದರು.

ಹುಬ್ಬಳಿಯ ಘಟನೆಯಲ್ಲಿ ಬಿಜೆಪಿ ನಾಯಕರು ತೋರಿಸಿದ ಆಸಕ್ತಿ ಇಲ್ಲಿ ಯಾಕೆ ತೋರಿಸುತ್ತಿಲ್ಲ?. ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರ ಪರವಾಗಿ ಬಿಜೆಪಿ ಯಾವಾಗ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತದೆ. ನೊಂದವರ ಮನೆಗೆ ಜೆಪಿ ನಡ್ಡಾ ಯಾವಾಗ ಹೋಗುತ್ತಾರೆ?. ಎಂದು ಪ್ರಿಯಾಂಕ್ ಖರ್ಗೆ ವಾಗ್ಧಾಳಿ ನಡೆಸಿದರು.

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿದ್ದ ಕುಮಾರಸ್ವಾಮಿಯವರೇ ಈಗ ನಿಮ್ಮ ಮನೆಯ ಮಗ ದಾರಿತಪ್ಪಿದ್ದಾನೆ. ಈಗ ಏನು ಹೇಳುತ್ತಿರಿ. ಪ್ರಜ್ವಲ್ ಅವನರನ್ನು ಪಕ್ಷದಿಂದ ಉಚ್ಛಾಟನೆ ಮಾಡುವುದು ದೊಡ್ಡ ವಿಷಯವಲ್ಲ. ಅವರೇ ನಾಲ್ಕು ಜನ ಇದ್ದಾರೆ ಉಚ್ಛಾಟನೆ ಮಾಡಬಹುದು. ಆದರೆ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಬೇಕು. ಸರ್ಕಾರ ಕಾನೂನು ಪ್ರಕಾರ ತನಿಖೆ ನಡೆಸಲು ಆದೇಶಿಸಿದೆ. ಮೋದಿ ಅವರು ʼಬೇಟಿ ಬಚಾವೋ ಬೇಟಿ ಪಡಾವೋʼ ಘೋಷಣೆ ಏನಾಯಿತು? ಎಂದು ಟೀಕಿಸಿದರು.

ಕಾಂಗ್ರೆಸ್ ನ ಅತಿಯಾದ ಓಲೈಕೆ ರಾಜಕಾರಣದಿಂದ ವಿದ್ವಂಸಕ ಕೃತ್ಯಗಳು ನಡೆಯುತ್ತಿದೆ ಎನ್ನುವ ಪ್ರಧಾನಿ ಹೇಳಿಕೆಗೆ ತೀಕ್ಷ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ‌"ಪ್ರಧಾನಿಗಳು ಪದೇ ಪದೇ ರಾಜ್ಯಕ್ಕೆ ಬಂದು ಹೀಗೆ ಸುಳ್ಳು ಹೇಳವುದು ಬೇಡ. ಈ ಹಿಂದೆ ಕುಕ್ಕರ್ ಸ್ಪೋಟ ಹಾಗೂ ಇತ್ತೀಚಿನ ಕೆಫೆ ರಾಮೇಶ್ವರಂ ಸ್ಫೋಟದ ವ್ಯಕ್ತಿಗಳು ಹಿಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಕ್ಷೇತ್ರ ತೀರ್ಥಹಳ್ಳಿಯಲ್ಲೇ ತರಬೇತಿ ಪಡೆದಿದ್ದರು. ಕೇಂದ್ರದ ತನಿಖಾ ತಂಡಗಳು ಐಸಿಸ್ ನಂತಹ ಅಂತರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಗಳು ಎಲ್ಲಿವೆ ಎನ್ನುವ ಬಗ್ಗೆ ರಾಜ್ಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಅವರಿಗೆ ಐಸಿಸ್ ಉಗ್ರರು ಎಲ್ಲಿದ್ದಾರೆ ಎನ್ನುವ ಮಾಹಿತಿ ಇರುವುದಿಲ್ಲವೇ?. ಪಿಎಫ್ ಐ ಹಾಗೂ ಎಸ್ ಡಿಪಿಐ ಗಳಿಗೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಫಂಡಿಂಗ್ ಮಾಡುತ್ತಿದೆ ಎಂದು ಸತ್ಯಜಿತ್ ಸುರತ್ಕಲ್, ಆರೆಸ್ಸೆಸ್ ನವರು ಹೇಳಿದ್ದಾರೆ" ಎಂದು ಹೇಳಿದರು.

ಇತ್ತೀಚಿಗೆ ಸಂಸತ್ ನಲ್ಲಿ ದಾಳಿಯಾದಾಗ ಆರೋಪಿಗಳಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರೇ ಪಾಸ್ ಕೊಟ್ಟಿದ್ದರು. ಇಂತಹ ಕೃತ್ಯ ನಡೆದಿದ್ದರೂ ಸಹ ಪ್ರತಾಪ್ ಸಿಂಹ ಪಕ್ಷದ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರದಲ್ಲಿದ್ದಾರೆ. ಅವರ ಮೊಬೈಲ್ ಸೀಝ್ ಮಾಡಿದ್ದೀರ ಅಲ್ಲವೇ?, ಅಲ್ಲಿ ಸಿಕ್ಕಿರುವ ಮಾಹಿತಿ ಯಾಕೆ ಬಹಿರಂಗಪಡಿಸಿಲ್ಲ?. ರಾಮೇಶ್ಬರಂ ಕೆಫೆ ಹಾಗೂ ಭಯೋತ್ಪಾದನೆ ಬಗ್ಗೆ ವೇದಿಕೆ ಮೇಲೆ ಮಾತನಾಡುವ ಮೋದಿ ಅವರು ಒಂದು ಪತ್ರಿಕಾಗೋಷ್ಠಿ ಕರೆದು ಎಲ್ಲಾ ವಿಚಾರಗಳ ಬಗ್ಗೆ ವಿವರವಾಗಿ ಮಾತನಾಡಲಿ ಅದೇ ಅವರ ರಾಜಕೀಯದ ಕೊನೆಯ ದಿನವಾಗಲಿದೆ ಎಂದು ಹರಿಹಾಯ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News