ಯಡಿಯೂರಪ್ಪ ಲಿಂಗಾಯತ ಅಲ್ಲ, ಅಪ್ಪ, ಮಕ್ಕಳ ಬಂಡವಾಳ ಹೊರಹಾಕುವೆ: ಶಾಸಕ ಯತ್ನಾಳ್

Update: 2024-03-12 17:04 GMT

ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಿಂಗಾಯತರಲ್ಲ. ಅಪ್ಪ, ಮಕ್ಕಳ ಬಂಡವಾಳವನ್ನು ಹೊರಹಾಕುವೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿದರು.

ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ನಗರದ ಜಗತ್ ವೃತ್ತದಲ್ಲಿನ ಜಗಜ್ಯೋತಿ ಬಸವೇಶ್ವರರ ಪುತ್ಥಳಿಯ ಆವರಣದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಿ.ಎಸ್. ಯಡಿಯೂರಪ್ಪ ಅವರು ಮೂರ್ನಾಲ್ಕು ಸ್ವಾಮಿಗಳನ್ನು ಹಿಡಿದಿದ್ದಾರೆ. ಅವರಿಗೆ ಹಣ ಕೊಡುತ್ತಾರೆ. ಹೀಗಾಗಿ ಅವರು ಯಡಿಯೂರಪ್ಪ ಅವರಿಗೆ ತಥಾಸ್ತು ಎನ್ನುತ್ತಾರೆ ಎಂದು ಗೇಲಿ ಮಾಡಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್ ಅವರು, ಪೂಜ್ಯ ತಂದೆ ಹಾಗೂ ಪೂಜ್ಯ ತಂದೆಯ ಮಕ್ಕಳು ಇದ್ದಾರಲ್ಲ. ಅವರು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದನ್ನೇ ದಂಧೆಯನ್ನಾಗಿಸಿಕೊಂಡಿದ್ದಾರೆ. ವಿಜಯೇಂದ್ರ ನನಗೆ ಸೋಲಿಸಲು ಹಣಕೊಟ್ಟು ಕಳಿಸಿದ್ದರು. ಒಬ್ಬ ಪುತ್ರ ಕೇಂದ್ರ ಸಚಿವರಾಗಬೇಕು. ಇನ್ನೊಬ್ಬ ಪುತ್ರ ರಾಜ್ಯದ ಮುಖ್ಯಮಂತ್ರಿಗಳಾಗಬೇಕು. ಅವರ ಮನೆಯಲ್ಲಿರುವ ಸಿಳ್ಳೆಮಿಳ್ಳಿಗಳು ರಾಜ್ಯಸಭಾ ಸದಸ್ಯರಾಗಬೇಕು, ವಿಧಾನ ಪರಿಷತ್ ಸದಸ್ಯರಾಗಬೇಕು. ಅವರ ಮನೆಯ ಬೆಕ್ಕುಗಳು ಜಿಲ್ಲಾ ಪಂಚಾಯಿತಿ ಸದಸ್ಯರಾಗಬೇಕು. ಇದು ಬಿ.ಎಸ್. ಯಡಿಯೂರಪ್ಪ ಅವರ ಕೊನೆಯ ಆಸೆಯಾಗಿದೆ. ಅವರ ಬಂಡವಾಳವನ್ನು ಲೋಕಸಭಾ ಚುನಾವಣೆಯ ನಂತರ ಹೊರಹಾಕುವೆ ಎಂದು ಅವರು ಹೇಳಿದರು.

ಈ ಬಾರಿಯ ಲೋಕಸಭಾ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಅವರದ್ದೇ ಹೊರತು ಬಿ.ಎಸ್. ಯಡಿಯೂರಪ್ಪ ಅವರದ್ದಲ್ಲ. ಹೀಗಾಗಿ ಲೋಕಸಭೆಯ ಎಲ್ಲ 28 ಸ್ಥಾನಗಳಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವರು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಂಚಮಸಾಲಿ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಯತ್ನಾಳ್ ಅವರು ಮಾತನಾಡಿ, ಹಿಂದೆ ನಮ್ಮ ಬಿಜೆಪಿ ಸರ್ಕಾರವಿದ್ದಾಗ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರವು 2ಡಿಗೆ ಸೇರಿಸಿ ಸಮಸ್ತ ವೀರಶೈವ ಲಿಂಗಾಯರಿಗೆ ನೋಟಿಫಿಕೇಶನ್ ಮಾಡಿತ್ತು. ಆಗ ಕಾಂಗ್ರೆಸ್ ವ್ಯಕ್ತಿ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಆ ಸಂದರ್ಭದಲ್ಲಿ ಆಡಳಿತ ಪಕ್ಷದ ಕಾಂಗ್ರೆಸ್ ಸದಸ್ಯ ವಿಜಯಾನಂದ್ ಕಾಶಪ್ಪನವರ್ ಅವರು 2ಎ ಆಗಬೇಕು ಎಂದು ಪಟ್ಟು ಹಿಡಿದರು. ಬೆಳಗಾವಿ ಕಿತ್ತೂರ ರಾಣಿ ಚೆನ್ನಮ್ಮ ಸರ್ಕಲ್ ಹತ್ತಿರ ರಾಜ್ಯ ಸರ್ಕಾರದ 2ಡಿ ಪ್ರತಿ ಸುಡಲಾಯಿತು ಎಂದು ಅವರು ತಿಳಿಸಿದರು.

ಬಿಜೆಪಿ ಸರ್ಕಾರವು 2ಎಯಲ್ಲಿ ಕುರುಬ, ಗಾಣಿಗ ಸಮುದಾಯಗಳು ಸೇರಿ ಒಟ್ಟು 104 ಸಮುದಾಯಗಳಿವೆ. ಅವರ ಹಕ್ಕುಗಳನ್ನು ಕಸಿದುಕೊಳ್ಳಬಾರದು ಎಂದು ಇಡೀ ವೀರಶೈವ ಲಿಂಗಾಯತರು, ಮರಾಠಾ, ಕ್ರಿಶ್ಚಿಯನ್ ಸಮುದಾಯ ಸೇರಿಸಿ 2ಡಿ ಎಂದು ಕೊಟ್ಟಿತ್ತು. ಒಕ್ಕಲಿಗರಿಗೆ, ಲಿಂಗಾಯತರಿಗೆ 2ಡಿ ಕೊಡುವ ಕುರಿತು ನಿರ್ಧರಿಸಿತ್ತು. ನಂತರ ಚುನಾವಣೆ ಬಂದಿದ್ದರಿಂದ ಅದು ಹಾಗೆಯೇ ನೆನೆಗುದಿಗೆ ಬಿದ್ದಿತ್ತು. ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಳಗಾವಿ ಅಧಿವೇಶನದಲ್ಲಿ ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರನ್ನು ಕರೆದು ಮಾತನಾಡಿ ನ್ಯಾಯ ಕೊಡುವುದಾಗಿ ಹೇಳಿದ್ದರು. ಬೆಂಗಳೂರು ವಿಧಾನ ಮಂಡಲ ಅಧಿವೇಶನ ಆಯಿತು. ಈಗಲೂ ಸಹ ಭರವಸೆ ಈಡೇರಿಸುವ ಕೆಲಸ ಮಾಡಿಲ್ಲ. ಕಲ್ಯಾಣ ಕರ್ನಾಟಕದ ಕ್ರಾಂತಿಕಾರಿ ಭೂಮಿಯಿಂದ ನಿರ್ಣಯ ಮಾಡುತ್ತೇವೆ. ಒಂದು ವಾರದಲ್ಲಿ ಘೋಷಣೆ ಮಾಡದೇ ಹೋದಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News