ಮೂಲಭೂತ ಸೌಲಭ್ಯ ವಂಚಿತ ಬಂಡಡ್ಕಕ್ಕೆ ದಾರಿ ಯಾವುದಯ್ಯಾ?

Update: 2024-07-16 10:54 GMT

ಮಡಿಕೇರಿ, ಜು.8: ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಕಾಡು. ಪಕ್ಷಿಗಳ ಚಿಲಿ ಪಿಲಿ ಸದ್ದು, ಮತ್ತೊಂದೆಡೆ ಹಾಲ್ನೊರೆಯಂತೆ ಉಕ್ಕಿ ಹರಿಯುವ ಪಯಸ್ವಿನಿ ನದಿ. ಬಂಡೆ ಕಲ್ಲುಗಳ ಮೇಲೆ ಉಕ್ಕಿ ಹರಿಯುವ ಪಯಸ್ವಿನಿ ನದಿಯ ಭೋರ್ಗರೆಯುವಿಕೆಯನ್ನು ದಾಟಿ ಮನೆ ಸೇರುವುದರ ವೇಳೆಗೆ ಜೀವ ಬಾಯಿಗೆ ಬಂದಿರುತ್ತದೆ.

ಇದು ಕೊಡಗು ಜಿಲ್ಲೆಯ ಗಡಿಭಾಗವಾದ ಸಂಪಾಜೆ ಗ್ರಾಮ ಪಂಚಾಯತ್, ಕೊಯನಾಡು ಸಮೀಪದ ಬಂಡಡ್ಕ ಗ್ರಾಮದ ನಿವಾಸಿಗಳ ಮಳೆಗಾಲದ ನಿತ್ಯ ಕರುಣಾಜನಕ ಜೀವನ. ಬಂಡೆ ಕಲ್ಲುಗಳ ಮೇಲೆ ನಡೆಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಉಕ್ಕಿ ಹರಿಯುವ ಪಯಸ್ವಿನಿ ನದಿಯ ರಭಸಕ್ಕೆ ಕೊಚ್ಚಿ ಹೋಗುವ ಭೀತಿ ಸ್ಥಳೀಯರದ್ದಾಗಿದೆ.

ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಇಂದಿಗೂ ಬಂಡಡ್ಕ ನಿವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹಕ್ಕುಪತ್ರವನ್ನು ನೀಡಿರುವ ಆಡಳಿತ ವರ್ಗವು, ಅರಣ್ಯ ವ್ಯಾಪ್ತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ಇಡೀ ಗ್ರಾಮವನ್ನೇ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.

ಬಂಡಡ್ಕ ಗ್ರಾಮದಲ್ಲಿರುವ ಐದು ಮನೆಗಳಲ್ಲಿ 8ಕ್ಕೂ ಅಧಿಕ ಮಂದಿ ಜೀವನ ನಡೆಸುತ್ತಿದ್ದಾರೆ. ಆದರೆ, ಮಳೆಗಾಲದಲ್ಲಿ ಈ ಗ್ರಾಮದ ನಿವಾಸಿಗಳು ಮೂರು ತಿಂಗಳುಗಳ ಕಾಲ ಹೊರಗಿನ ಪ್ರಪಂಚವನ್ನೇ ಮರೆತು ಬಿಡಬೇಕು.

ನೀರು ಪಾಲಾದ ಅಡಿಕೆ ಪಾಲ: ಕಳೆದೆರಡು ವರ್ಷದ ಹಿಂದೆ ಸಂಪಾಜೆ ಗ್ರಾಪಂ ಅಡಿಕೆ ಮತ್ತು ಬಿದಿರಿನಿಂದ ನಿರ್ಮಿಸಿರುವ ಮರದ ಪಾಲವೂ ಪಯಸ್ವಿನಿ ನದಿಯ ನೀರು ಪಾಲಾಗಿದೆ. ಇದೀಗ ಮುಂಗಾರು ಕಾಲಿಟ್ಟು ತಿಂಗಳು ಕಳೆದರೂ ಬಂಡಡ್ಕ ಗ್ರಾಮದತ್ತ ಸಂಪಾಜೆ ಗ್ರಾಪಂ ತಿರುಗಿಯೂ ನೋಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಪ್ರಸಕ್ತ ಪಯಸ್ವಿನಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ಬಂಡಡ್ಕ ಗ್ರಾಮಸ್ಥರಿಗೆ ನದಿ ದಾಟಲು ಸಾಧ್ಯವಿಲ್ಲ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮರಕ್ಕೆ ಹಗ್ಗವನ್ನು ಕಟ್ಟಿಕೊಂಡು, ಅದನ್ನು ಕೈಯಲ್ಲಿ ಹಿಡಿದುಕೊಂಡು ಸಾಹಸಮಯವಾಗಿ ನದಿಯಲ್ಲಿನ ಬಂಡೆ ಕಲ್ಲುಗಳನ್ನು ದಾಟಿ ಮನೆ ಸೇರಬೇಕು.

ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ಉಂಟಾದರೆ ಆಸ್ಪತ್ರೆ ಸೇರಲು ಸಾಧ್ಯವಿಲ್ಲ. ಉಕ್ಕಿ ಹರಿಯುವ ಪಯಸ್ವಿನಿ ನದಿ ದಾಟಲೂ ಕಷ್ಟಸಾಧ್ಯ. ಬಂಡಡ್ಕ ಗ್ರಾಮದ ಪುಷ್ಪಾವತಿ ಎಂಬವರ 85 ವರ್ಷದ ತಾಯಿಗೆ ಕಳೆದ ವಾರದ ಹಿಂದೆ ಆರೋಗ್ಯದಲ್ಲಿ ಏರುಪೇರಾದಾಗ ನಾಟಿ ಮದ್ದು ಮಾಡಿದ್ದು, ಸದ್ಯಕ್ಕೆ ಆರೋಗ್ಯ ಕೊಂಚ ಚೇತರಿಕೆ ಕಂಡಿದೆ.

ಅದಲ್ಲದೆ ವೃದ್ಧೆಗೆ ಮೆಡಿಕಲ್‌ನಿಂದ ಔಷಧಿಯನ್ನು ಖರೀದಿಸಿದ್ದ ಕೊಯನಾಡಿನ ನಿವಾಸಿಗೆ ಪಯಸ್ವಿನಿ ನದಿ ದಾಟಲು ಸಾಧ್ಯವಾಗದೆ ಪ್ಲಾಸ್ಟಿಕ್‌ನಲ್ಲಿ ಬಂಡೆ ಕಲ್ಲುಗಳ ಮೇಲೆ ನಿಂತು ಔಷಧಿಯನ್ನು ಎಸೆದು ಪುಷ್ಪಾವತಿಯ ಕೈ ಸೇರಿಸಿದ್ದಾರೆ. ರಾತ್ರಿ ವೇಳೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಸಂಪಾಜೆಯಿಂದ ವೈದ್ಯರನ್ನು ಕರೆಸಿ ಮನೆಯಲ್ಲಿಯೇ ಚಿಕಿತ್ಸೆ ನೀಡಲೂ ಸಾಧ್ಯವಿಲ್ಲ ಎಂಬುವುದು ಸ್ಥಳೀಯರ ಅಳಲಾಗಿದೆ.

ಮಳೆಗಾಲದಲ್ಲಿ ಹೊರಗಿನ ಪ್ರಪಂಚವನ್ನೇ ಮರೆತು ಬಿಡುವ ಬಂಡಡ್ಕ ಗ್ರಾಮಸ್ಥರು ಮೂರು ತಿಂಗಳಿಗೆ ಬೇಕಾದ ದಿನಸಿವಸ್ತುಗಳನ್ನು ಶೇಖರಿಸಿಡುತ್ತಾರೆ. ಉಚಿತವಾಗಿ ವಿದ್ಯುತ್ ನೀಡುವ ಈ ಕಾಲದಲ್ಲಿ ಸ್ವಾತಂತ್ರ್ಯ ಲಭಿಸಿ ಇಂದಿಗೂ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ದಾರಿಯೂ ಇಲ್ಲದೆ ಕಾಲುದಾರಿಯೇ ರಸ್ತೆಯಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಬಂಡಡ್ಕ ನಿವಾಸಿಗಳ ಮೂಲಭೂತ ಸೌಕರ್ಯಗಳಿಗೆ ಇದುವರೆಗೆ ಪರಿಹಾರ ಕಂಡುಕೊಂಡಿಲ್ಲ. ಗ್ರಾಮದಲ್ಲಿರುವ ವಿದ್ಯಾರ್ಥಿಗಳು ಸಂಬಂಧಿಕರ ಮನೆ ಮತ್ತು ಹಾಸ್ಟೆಲ್‌ನಲ್ಲೇ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮನೆ, ಜಮೀನು ಎಲ್ಲವನ್ನೂ ಬಿಟ್ಟು ಮಳೆಗಾಲದಲ್ಲಿ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಯಲ್ಲಿಯೂ ವಾಸಿಸಲು ನಾವು ಶ್ರೀಮಂತರೇನೂ ಅಲ್ಲ ಎಂದು ಬಂಡಡ್ಕ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಬಂಡಡ್ಕ ನಿವಾಸಿಗಳು ಪಯಸ್ವಿನಿ ನದಿ ದಾಟಲು, ಪಾಲವನ್ನು ನಿರ್ಮಿಸಿ ಕೊಡಲು ಸಂಪಾಜೆ ಗ್ರಾಪಂ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ. ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣದಿಂದ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಮಾನವೀಯ ನೆಲೆಗಟ್ಟಿನಲ್ಲಾದರೂ ಶಾಸಕರು, ಆಡಳಿತ ವರ್ಗ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂಬುವುದು ಬಂಡಡ್ಕ ನಿವಾಸಿಗಳ ಆಗ್ರಹವಾಗಿದೆ.

ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಮಳೆಗಾಲದಲ್ಲಿ ಈ ಗ್ರಾಮಸ್ಥರಿಗೆ ಹೊರಗಿನ ಪ್ರಪಂಚವೇ ಗೊತ್ತಿಲ್ಲ. ಪಯಸ್ವಿನಿ ನದಿ ದಾಟಲು ಸಾಧ್ಯವಿಲ್ಲ. ಸಂಪಾಜೆ ಗ್ರಾಪಂ ಮರದ ಪಾಲವನ್ನು ನಿರ್ಮಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಹಕ್ಕು ಪತ್ರವನ್ನು ನೀಡಿರುವ ಆಡಳಿತ ವರ್ಗಕ್ಕೆ! ಬಂಡಡ್ಕ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೊಡಲು ಸಾಧ್ಯ ಇಲ್ಲವೇ?. ಮಳೆಗಾಲದಲ್ಲಿ ಬಂಡಡ್ಕ ನಿವಾಸಿಗಳಿಗೆ ಏನಾದರೂ ಅನಾಹುತ ಸಂಭವಿಸಿದರೆ ನೇರ ಹೊಣೆ ಸ್ಥಳೀಯ ಗ್ರಾಪಂ ಮತ್ತು ಆಡಳಿತ ವರ್ಗ.ಗ್ರಾಪಂ ಆದಷ್ಟು ಬೇಗ ಪಯಸ್ವಿನಿ ನದಿ ದಾಟಲು ಬಂಡಡ್ಕ ಗ್ರಾಮಸ್ಥರಿಗೆ ಪಾಲವನ್ನು ನಿರ್ಮಿಸಿ ಕೊಡಬೇಕು.

► ರಾಘವೇಂದ್ರ, ಕೊಯನಾಡು ಗ್ರಾಮಸ್ಥ

ನನ್ನ ತಾಯಿಗೆ 85 ವರ್ಷ ಪ್ರಾಯ ದಾಟಿದೆ. ಮಳೆಗಾಲದಲ್ಲಿ ಆರೋಗ್ಯದಲ್ಲಿ ತೊಂದರೆಯಾದರೆ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಮಳೆಗಾಲದ ಮೂರು ತಿಂಗಳು ಮನೆಯಿಂದ ಹೊರಗಡೆ ಹೋಗಲೂ ಆಗಲ್ಲ. ನದಿ ದಾಟಲು ಪಾಲ ಇಲ್ಲದೆ ಬಂಡೆಕಲ್ಲುಗಳ ಮೇಲೆ ನಡೆಯುವಾಗ ಹಲವು ಬಾರಿ ಜಾರಿ ಬಿದ್ದು ಕಾಲು ಗಾಯವಾಗಿದೆ. ಕನಿಷ್ಠ ಮಳೆಗಾಲದಲ್ಲಿ ಪಯಸ್ವಿನಿ ನದಿ ದಾಟಲು ಮರದ ಪಾಲ ನಿರ್ಮಿಸಿ ಕೊಡಿ. ಮಳೆಗಾಲದಲ್ಲಿ ನಮಗೇನಾದರು ಸಂಭವಿಸಿದರೆ ಯಾರು ಹೊಣೆ?.

► ಪುಷ್ಪಾವತಿ, ಬಂಡಡ್ಕ ನಿವಾಸಿ

ನನ್ನ ಮಗಳಿಗೆ ಸರ್ಜರಿ ಆಗಿದ್ದು, ಸುಳ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಇದೀಗ ಪಯಸ್ವಿನಿ ನದಿ ನೀರು ಹೆಚ್ಚಳವಾಗಿದೆ. ಮನೆಗೆ ಬರಲು ಸಾಧ್ಯವಿಲ್ಲ. ಮರದ ಪಾಲವನ್ನು ನಿರ್ಮಿಸಿಕೊಟ್ಟರೆ ನಾವು ಹೇಗಾದರೂ ಮಾಡಿ ಮನೆ ತಲುಪುತ್ತೇವೆ. ವೃದ್ಧರು, ಮಕ್ಕಳು ಮಳೆಗಾಲದಲ್ಲಿ ಹೇಗೆ ಜೀವನ ಮಾಡುವುದು?. ಗ್ರಾಪಂ ಕನಿಷ್ಠ ನಮಗೆ ಪಾಲವನ್ನಾದರೂ ನಿರ್ಮಿಸಿ ಕೊಡಲಿ.

► ಕಾನೂರು ಮೋನಪ್ಪ ಗೌಡ,ಬಂಡಡ್ಕ.

ಅಡಿಕೆ ಮತ್ತು ಬಿದಿರಿನಿಂದ ನಿರ್ಮಿಸಿರುವ ಪಾಲವು ಮುರಿದು ಎರಡು ಬುದ್ದಿ ವರ್ಷ ಕಳೆದಿದೆ. ಇದೀಗ ಪಯಸ್ವಿನಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಗ್ರಾಪಂ ಈ ವರ್ಷ ಪಾಲವನ್ನು ನಿರ್ಮಿಸಿಕೊಟ್ಟಿಲ್ಲ. ಮಳೆಗಾಲದಲ್ಲಿ ಮನೆಯಿಂದ ಹೊರಗಡೆ ಹೋಗಲೂ ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆ ಆರೋಗ್ಯದಲ್ಲಿ ತೊಂದರೆಯಾದರೆ ನಾವು ಹೇಗೆ ಆಸ್ಪತ್ರೆಗೆ ಹೋಗುವುದು?. ಮಳೆಗಾಲದಲ್ಲಿ ಪಯಸ್ವಿನಿ ನದಿಯಲ್ಲಿ ಕಾಲಿಡಲೂ ಭಯ ಆಗುತ್ತದೆ. ನಾವು ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿಯೇ ಜೀವನ ನಡೆಸುತ್ತಿದ್ದೇವೆ. ಇದುವರೆಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿಲ್ಲ. ಮಳೆಗಾಲದಲ್ಲಿ ಪಯಸ್ವಿನಿ ನದಿದಾಟಲು ಕನಿಷ್ಠ ಪಾಲವನ್ನಾದರೂ ನಿರ್ಮಿಸಿಕೊಡಿ.

► ಲಿಂಗಪ್ಪ, ಬಂಡಡ್ಕ ನಿವಾಸಿ

ಗ್ರಾಪಂನಿಂದ ಪ್ರತೀ ವರ್ಷ ಅಡಿಕೆ ಪಾಲವನ್ನು ನಿರ್ಮಿಸಿಕೊಡುತ್ತೇವೆ. ಈಗಾಗಲೇ 24 ಸಾವಿರ ರೂ. ವೆಚ್ಚದಲ್ಲಿ ಅಡಿಕೆ ಪಾಲವನ್ನು ನಿರ್ಮಿಸುವ ಕೆಲಸ ಆಗುತ್ತಿದೆ. ಮುಂದಿನ ವಾರದೊಳಗೆ ಬಂಡಡ್ಕ ಗ್ರಾಮಸ್ಥರಿಗೆ ಪಯಸ್ವಿನಿ ನದಿ ದಾಟಲು ಅಡಿಕೆ ಪಾಲವನ್ನು ತಾತ್ಕಾಲಿಕವಾಗಿ ಅಳವಡಿಸುತ್ತೇವೆ. ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಬಂಡಡ್ಕ ಗ್ರಾಮಕ್ಕೆ ಶಾಶ್ವತ ಸೇತುವೆ ನಿರ್ಮಿಸಲು ಮನವಿ ಸಲ್ಲಿಸಲಾಗಿದೆ.

► ರಮಾದೇವಿ ಬಾಲಚಂದ್ರ ಕಳಗಿ,

ಸಂಪಾಜೆ ಗ್ರಾಪಂ ಅಧ್ಯಕ್ಷೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಂ ಇಸ್ಮಾಯಿಲ್ ಕಂಡಕರೆ

contributor

Similar News