ಮಡಿಕೇರಿ| ವಾಹನ ಅಪಹರಿಸಿ 50 ಲಕ್ಷ ರೂ. ದರೋಡೆ : ಇಬ್ಬರ ಮೇಲೆ ಹಲ್ಲೆ
ಮಡಿಕೇರಿ ಡಿ.9 : ಕೇರಳ ಮೂಲದ ವ್ಯಕ್ತಿಗಳ ವಾಹನ ಅಡ್ಡಗಟ್ಟಿ ಸುಮಾರು 50 ಲಕ್ಷ ರೂ. ನಗದು ಹಾಗೂ ವಾಹನವನ್ನು ಅಪಹರಿಸಿದ ಘಟನೆ ಪೊನ್ನಂಪೇಟೆ ತಾಲ್ಲೂಕಿನ ದೇವರಪುರದಲ್ಲಿ ನಡೆದಿದೆ.
ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ತಿರುವರಾಂಗದಿ ತಾಲ್ಲೂಕಿನ ಕೊಡಕಾಡ್ ನಿವಾಸಿ ಗುತ್ತಿಗೆದಾರ ಶಮ್ಜದ್ ಕೆ. (38) ಅವರು ನೀಡಿರುವ ದೂರನ್ನು ಆಧರಿಸಿ ಕೊಡಗು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶಮ್ಜದ್ ಅವರು ಕೇರಳದ ಕೋಯಿಕೋಡ್ ನ ಅಡರೂರು ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿ ಅಫ್ನು (22) ಅವರೊಂದಿಗೆ ಡಿ.8 ರಂದು ತಮ್ಮ ಕಾರಿನಲ್ಲಿ ಮೈಸೂರಿಗೆ ತೆರಳಿದ್ದರು. ಚಿನ್ನಾಭರಣಗಳನ್ನು ಮಾರಾಟ ಮಾಡಿ ಕೇರಳಕ್ಕೆ ಮರಳುತ್ತಿದ್ದಾಗ ಡಿ.9 ರ ಬೆಳಗಿನಜಾವ 3ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾರಿನಲ್ಲಿ ಬರುತ್ತಿದ್ದಾಗ ದೇವರಪುರ ವ್ಯಾಪ್ತಿಯ ರಸ್ತೆಯಲ್ಲಿ ಲಾರಿಯೊಂದು ಕೆಟ್ಟು ನಿಂತಿತ್ತು. ಇದರ ಬಳಿ ಕಾರು ನಿಲ್ಲಿಸಿದಾಗ ಕೆಲವು ವಾಹನಗಳಲ್ಲಿ ಬಂದ 10 ರಿಂದ 15 ಮಂದಿ ಇದ್ದ ತಂಡ ಮಲೆಯಾಳಂ ಭಾಷೆಯಲ್ಲಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ನಮ್ಮ ಬಳಿ ಹಣವಿಲ್ಲವೆಂದು ಹೇಳಿದಾಗ ಹಲ್ಲೆ ನಡೆಸಿದ ವ್ಯಕ್ತಿಗಳು ನಮ್ಮಿಬ್ಬರನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಅರ್ಧದಾರಿಯಲ್ಲಿ ನಮ್ಮನ್ನು ಇಳಿಸಿ ನಮ್ಮ ಕಾರನ್ನು ಅಪಹರಿಸಿದ್ದಾರೆ. ಕಾರಿನಲ್ಲಿ ಚಿನ್ನಾಭರಣ ಮಾರಾಟ ಮಾಡಿದ ಹಣ ಸುಮಾರು 50 ಲಕ್ಷ ರೂ. ಇತ್ತು ಎಂದು ಶಮ್ಜದ್ ದೂರಿಕೊಂಡಿದ್ದಾರೆ.
ಕತ್ತಲು ವಾತಾವರಣದಲ್ಲಿ ಇಬ್ಬರು ಎಲ್ಲಿದ್ದೇವೆ ಎಂದು ತಿಳಿಯದೆ ಒಂದೂವರೆ ಕಿ.ಮೀ ದೂರ ನಡೆದಾಗ ಮುಖ್ಯ ರಸ್ತೆ ಎದುರಾಗಿದೆ. ಮುಂಜಾನೆ ಸುಮಾರು 4 ಗಂಟೆಗೆ ಪತ್ರಿಕೆಯ ವಾಹನವೊಂದರ ಸಹಕಾರ ಪಡೆದು ವಿರಾಜಪೇಟೆ ಪೊಲೀಸ್ ಠಾಣೆಗೆ ಬಂದಿದ್ದೇವೆ. ನಮ್ಮನ್ನು ಅಪರಿಚಿತ ವ್ಯಕ್ತಿಗಳು ಬಿಟ್ಟು ಹೋದ ಸ್ಥಳ ಗೋಣಿಕೊಪ್ಪ ಸಮೀಪದ ದೇವರಪುರ ಎಂದು ತಿಳಿದು ಬಂದಿದೆ. ನಂತರ ವಿರಾಜಪೇಟೆ ಪೊಲೀಸರೇ ಗೋಣಿಕೊಪ್ಪ ಪೊಲೀಸ್ ಠಾಣೆಗೆ ನಮ್ಮನ್ನು ಕರೆ ತಂದಿದ್ದು, ಇಲ್ಲಿ ದೂರು ದಾಖಲಿಸಿದ್ದೇವೆ ಎಂದು ಶಮ್ಜದ್ ಹೇಳಿಕೊಂಡಿದ್ದಾರೆ.
ದೂರಿನನ್ವಯ ತಕ್ಷಣ ಕಾರ್ಯಪ್ರವೃತ್ತರಾದ ಕೊಡಗು ಪೊಲೀಸರು ತಪಾಸಣೆ ನಡೆಸಿದಾಗ ಅಪಹರಿಸಲ್ಪಟ್ಟಿದ್ದ ಕಾರು ಕೊಳತೋಡು ಗ್ರಾಮ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಕಾರನ್ನು ಹಾನಿಗೊಳಿಸಲಾಗಿದ್ದು, ಸ್ಥಳಕ್ಕೆ ಐಜಿ ಡಾ.ಬೋರಲಿಂಗಯ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದರು.
ವಿಶೇಷ ತಂಡ ರಚನೆ: ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ತಮ್ಮ ನೇತೃತ್ವದಲ್ಲಿ, ಹೆಚ್ಚುವರಿ ಎಸ್‍ಪಿ ಮತ್ತು ಡಿವೈಎಸ್‍ಪಿ ಮಾರ್ಗದರ್ಶನದಲ್ಲಿ ಮೂವರು ಇನ್ಸ್ ಪೆಕ್ಟರ್ ಗಳು ಹಾಗೂ 7 ಮಂದಿ ಸಬ್ ಇನ್ಸ್ ಪೆಕ್ಟರ್ ಗಳು ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಕೆ.ರಾಮರಾಜನ್ ತಿಳಿಸಿದ್ದಾರೆ.