ಮಡಿಕೇರಿ| ವಾಹನ ಅಪಹರಿಸಿ 50 ಲಕ್ಷ ರೂ. ದರೋಡೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು
ಮಡಿಕೇರಿ: ಪೊನ್ನಂಪೇಟೆ ತಾಲೂಕಿನ ದೇವರಪುರದಲ್ಲಿ ನಡೆದ ಕೇರಳ ಮೂಲದ ವ್ಯಕ್ತಿಯೊಬ್ಬರ ವಾಹನ ಅಡ್ಡಗಟ್ಟಿ ಸುಮಾರು 50 ಲಕ್ಷ ರೂ. ನಗದು ಹಾಗೂ ವಾಹನವನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ನಗರದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರೋಡೆ ಮಾಡಿದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ, ಇದರ ಜೊತೆಗೆ ಹಣ ಕಳೆದುಕೊಂಡಿರುವುದಾಗಿ ದೂರು ನೀಡಿರುವ ಕೇರಳ ರಾಜ್ಯದ ಮಲಪ್ಪುರಂ ನಿವಾಸಿ ಗುತ್ತಿಗೆದಾರ ಶಮ್ಜದ್ ಕೆ. ಅವರನ್ನು ಕೂಡ ವಿಚಾರಣೆಗೊಳಪಡಿಸಲಾಗಿದೆ. ಮಾರಾಟ ಮಾಡಲು ಚಿನ್ನಾಭರಣ ಎಲ್ಲಿಂದ ಬಂತು, ಯಾರಿಗೆ ಮಾರಾಟ ಮಾಡಲಾಗಿದೆ, 50 ಲಕ್ಷ ರೂ.ಗಳಷ್ಟು ದೊಡ್ಡ ಮೊತ್ತವನ್ನು ರಾತ್ರಿ ವೇಳೆ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳ ನಡುವೆ ವಿಚಾರಣೆ ನಡೆಯುತ್ತಿದೆ ಎಂದರು.
ಚಿನ್ನಾಭರಣ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ದೂರುದಾರರ ಬಳಿ ಯಾವುದೇ ದಾಖಲೆಗಳಿಲ್ಲ, ತೆರಿಗೆ ಪಾವತಿಸಿದ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ತೆರಿಗೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಗಿದೆ. ದರೋಡೆಕೋರರ ಪತ್ತೆಗೆ ವಿಶೇಷ ತಂಡ ರಚನೆ ಮಾಡಿ ತನಿಖೆ ಕೈಗೊಳ್ಳಲಾಗಿದೆ, ಮತ್ತೊಂದೆಡೆ ದೂರು ನೀಡಿದವರ ವಿರುದ್ಧವೂ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದರು.