ಕೊಡಗಿನಲ್ಲಿ ಮುಂದುವರಿದ ಮಳೆಯ ಅಬ್ಬರ | ಹಲವು ಮನೆಗಳಿಗೆ ಹಾನಿ : ತುಂಬಿ ಹರಿಯುತ್ತಿರುವ ನದಿ-ತೊರೆಗಳು
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ಮಳೆ ತೀವ್ರತೆಯನ್ನು ಪಡೆದುಕೊಂಡಿದೆ. ಎರಡು ದಿನಗಳ ಧಾರಾಕಾರ ಮಳೆಯಿಂದ ಹಲವೆಡೆ ಹಾನಿಯಾಗಿದೆ.
ಜಿಲ್ಲೆಯಲ್ಲಿನ ನದಿ, ತೊರೆ, ಹಳ್ಳಕೊಳ್ಳ, ಜಲಾಶಯಗಳಲ್ಲಿನ ನೀರಿನ ಮಟ್ಟ ಏರಿಕೆಯಾಗಿದೆ. ಜಿಲ್ಲೆಯ ಶಾಂತಳ್ಳಿ, ಭಾಗಮಂಡಲ, ಸೋಮವಾರಪೇಟೆ, ಮಡಿಕೇರಿ, ಸುಂಟಿಕೊಪ್ಪ, ನಾಪೊಕ್ಲು, ಶನಿವಾರಸಂತೆ, ಶ್ರೀಮಂಗಲ, ಸಂಪಾಜೆ, ಹೀಗೆ ವಿವಿಧ ಕಡೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭಾಗಮಂಡಲ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ವಿವಿಧೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಮರ, ವಿದ್ಯುತ್ ಕಂಬಗಳು ಬಿದ್ದು ಹಾನಿಯುಂಟಾಗಿದೆ.
ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಹಾನಿಯಾಗಿದ್ದು, ನಗರಸಭೆ ಪೌರಾಯುಕ್ತ ವಿಜಯ್ ಅವರು ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮರಗೋಡು ಗ್ರಾಮದ ಎಂ.ಕೆ.ಅಣ್ಣು ಅವರ ವಾಸದ ಮನೆಯು ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಪ್ರವೀಣ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ವೀಕ್ಷಿಸಿದರು. ಕುಟುಂಬವನ್ನು ಬೇರೊಂದು ಮನೆಗೆ ಸ್ಥಳಾಂತರಿಸಿದರು. ಸೋಮವಾರಪೇಟೆ ಹೋಬಳಿಯ ನೇಗಳ್ಳಿ ಕರ್ಕಳ್ಳಿ ಗ್ರಾಮದ ನಿವಾಸಿ ಜಯಂತಿ ಎಂಬವರ ಮನೆಯ ಮೇಲೆ ಮರ ಬಿದ್ದು ಮೇಲ್ಚಾವಣಿ ಮತ್ತು ಗೋಡೆ ಪೂರ್ಣ ಹಾನಿಯಾಗಿದೆ. ಸುಂಟಿಕೊಪ್ಪ ಹೋಬಳಿಯ ಅಂದಾಗೋವೆ ಗ್ರಾಮದ ಅಬ್ಬಾಸ್ ಎಂಬವರ ಮನೆಯ ಮೇಲ್ಛಾವಣಿಯ ಶೀಟುಗಳು ಗಾಳಿ ಮಳೆಗೆ ಹಾನಿಗೊಂಡಿದೆ ಎಂದು ತಿಳಿದು ಬಂದಿದೆ.
ಮಾದಾಪಟ್ಟಣ ಗ್ರಾಮದ ನಿವಾಸಿ ಬಸವರಾಜು ಅವರ ವಾಸದ ಮನೆಯ ಗೋಡೆ ಹಾನಿ ಹಾನಿಯಾಗಿದೆ. ಈ ಸಂಬಂಧ ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ಮಾಡಿದರು. ಕುಶಾಲನಗರ ಹೋಬಳಿಯ ಹೆಗ್ಗಡಳ್ಳಿ ಗ್ರಾಮದ ಲಕ್ಷ್ಮಿ ಎಂಬವರ ಮನೆಯ ಗೋಡೆ ಹಾನಿಯಾಗಿದ್ದು, ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಪರಿಶೀಲಿಸಿದರು. ಭಾಗಮಂಡಲ ಹೋಬಳಿ ಬೆಟ್ಟತ್ತೂರು ಗ್ರಾಮದ ದೇವರಕೊಲ್ಲಿ ಎಂಬಲ್ಲಿ ಕುಡಿಯರ ಗೌರಮ್ಮ ಕರುಂಬಯ್ಯ ಅವರ ಮನೆ ಮೇಲೆ ಮರ ಬಿದ್ದು ಹೆಚ್ಚಿನ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ನೀರಿನ ಮಟ್ಟ ಏರಿಕೆ : ಕುಶಾಲನಗರ ಸಮೀಪದ ಕಣಿವೆ ತೂಗು ಸೇತುವೆ ಬಳಿ ಜೀವನದಿ ಕಾವೇರಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ನದಿಯ ನೀರಿನ ಹರಿವು ಹೆಚ್ಚಿರುವುದರಿಂದ ತಹಶೀಲ್ದಾರ್ ಕಿರಣ್ ಗೌರಯ್ಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಕಟ್ಟಡ ಕಾಮಗಾರಿ ಪರಿಶೀಲನೆ : ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ಸ್ಥಳಕ್ಕೆ ತಾಲ್ಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ ಭೇಟಿ ನೀಡಿ ಪರಿಶೀಲಿಸಿದರು.
ಕಾರ್ಮಿಕರು ಕೆಲಸದ ಸಮಯದಲ್ಲಿ ಸುರಕ್ಷಿತಾ ಕ್ರಮಗಳನ್ನು ಕೈಗೊಂಡು, ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಎಚ್ಚರಿಗೆ ವಹಿಸುವಂತೆ ತಿಳಿವಳಿಕೆ ನೀಡಿದರು. ಹಾಗೆಯೇ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಹಶೀಲ್ದಾರರಾದ ಕಿರಣ್ ಗೌರಯ್ಯ, ಪ್ರವೀಣ್ ಕುಮಾರ್, ರಾಮಚಂದ್ರ, ಪೌರಾಯುಕ್ತ ವಿಜಯ್, ತಾಲ್ಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ ಇತರರು ತಮ್ಮ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಳೆ ವಿವರ :
ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 58.85 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 8.87 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1188.07 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 575.20 ಮಿ.ಮೀ ಮಳೆಯಾಗಿತ್ತು.