ಮಳೆಯ ಅಬ್ಬರಕ್ಕೆ ಕೊಡಗು ತತ್ತರ | ಹಲವು ಕುಟುಂಬಗಳ ಸ್ಥಳಾಂತರ : ಅಪಾರ ಹಾನಿ
ಮಡಿಕೇರಿ : ಎಡೆಬಿಡದೆ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಕೊಡಗು ತತ್ತರಗೊಂಡಿದೆ. ನದಿ, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬರೆಗಳು ಜರಿಯುತ್ತಿವೆ, ರಸ್ತೆಗಳು ಜಲಾವೃತಗೊಳ್ಳುತ್ತಿದ್ದು, ಅನೇಕ ಮನೆಗಳು ಕುಸಿದು ಬಿದ್ದಿದೆ. ಅಪಾಯದಂಚಿನ ಹಲವು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ವಿರಾಜಪೇಟೆ ತಾಲೂಕು ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆಯಲ್ಲಿ ಭಾರಿ ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈ ಹಿನ್ನೆಲೆ ಕರಡಿಗೋಡು ಹೊಳೆಕೆರೆ ಬದಿಯಲ್ಲಿ ವಾಸವಿರುವ 9 ಕುಟುಂಬದವರಿಗೆ ಪ್ರವಾಹ ಭೀತಿ ಇರುವುದರಿಂದ ಸ್ಥಳಾಂತರಿಸಲಾಗಿದೆ. ಈ ಸಂಬಂಧ ತಹಶೀಲ್ದಾರರಾದ ರಾಮಚಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇತರರು ಭೇಟಿ ನೀಡಿ ವೀಕ್ಷಿಸಿದರು. ಕುಂಜಿಲ ಗ್ರಾಮದ ಖದಿಸಮ್ಮ ಎಂಬುವವರ ವಾಸದ ಮನೆ ಹಾನಿಯಾಗಿದ್ದು, ಮನೆಯು ಬೀಳುವ ಸ್ಥಿತಿಯಲ್ಲಿದೆ. ಈ ಹಿನ್ನೆಲೆ ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ.
ಮಡಿಕೇರಿ ಮೂರ್ನಾಡು ಮುಖ್ಯ ರಸ್ತೆಯ ಕಗ್ಗೊಡ್ಲು ಗ್ರಾಮದ ಮುತ್ತಪ್ಪ ಎಂಬುವರ ಅಂಗಡಿ ಮತ್ತು ಮನೆಗೆ ಹೆಚ್ಚಿನ ಮಳೆಯಿಂದಾಗಿ ಹೊಳೆ ತುಂಬಿ ನೀರು ಹರಿದು ಜಲಾವೃತವಾಗಿದೆ. ಈ ಕುಟುಂಬದವರನ್ನು ಸ್ಥಳಾಂತರಿಸಲು ಕ್ರಮವಹಿಸಲಾಗಿದೆ.
ಕುಶಾಲನಗರ ಹೋಬಳಿ ನೆಲ್ಯ ಹುದಿಕೇರಿ ಗ್ರಾಮದ ಕಾವೇರಿ ನದಿ ಪಾತ್ರದ ಬಳಿ ವಾಸವಾಗಿದ್ದ ರಾಜು ಎಂಬರ ಮನೆಗೆ ನೀರು ನುಗ್ಗಿದ್ದು. ಈ ಕುಟುಂಬಕ್ಕೆ ಕುಶಾಲನಗರ ತಹಸೀಲ್ದಾರ್ ಅವರು ಆಹಾರ ಕಿಟ್ ನೀಡಿ, ಕುಟುಂಬವನ್ನು ಸ್ಥಳಾಂತರಿಸಲಾಯಿತು.
ಕುಶಾಲನಗರ ಹೋಬಳಿ ನೆಲ್ಯಹುದಿಕೇರಿ ಗ್ರಾಮದ ಕಾವೇರಿ ನದಿ ಪಾತ್ರದಲ್ಲಿ ವಾಸವಾಗಿದ್ದ ಅಕ್ಕಣ್ಣಿ ಕರ್ಪ ಅವರ ಮನೆಗೆ ಕಾವೇರಿ ನದಿ ನೀರು ನುಗ್ಗಿದ್ದು, ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ಆಹಾರ ಕಿಟ್ ವಿತರಿಸಿದರು. ಈ ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ.
ವಿರಾಜಪೇಟೆ ಹೋಬಳಿ ಅಂಬಟ್ಟಿ ಗ್ರಾಮದ ನಿವಾಸಿ ಕೆ ಅಲೀಮಾ ರವರ ವಾಸದ ಮನೆಯ ಹಿಂಭಾಗದಲ್ಲಿ ಬರೆ ಕುಸಿಯುತ್ತಿದ್ದು, ಈ ಸಂಬಂಧ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕುಟುಂಬದವರನ್ನು ಸ್ಥಳಾಂತರಿಸಿದ್ದಾರೆ. ಚೇಲವಾರ ಗ್ರಾಮದ ಚೆಟ್ಟಿಯಪ್ಪ ಎಂಬುವವರ ವಾಸದ ಮನೆಯ ಹಿಂಭಾಗದಲ್ಲಿ ಗೋಡೆ ಕುಸಿದಿದೆ. ಮನೆಯು ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆಯಿದ್ದು, ಕುಟುಂಬದವರ ಸ್ಥಳಾಂತರಕ್ಕೆ ತಾಲ್ಲೂಕು ಆಡಳಿತ ಕ್ರಮವಹಿಸಿದೆ.
ಭಾಗಮಂಡಲ ಜಲಾವೃತ :
ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಎಡೆಬಿಡದೆ ಧಾರಾಕಾರ ಮಳೆಯಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ಪ್ರವಾಹದ ನೀರು ಶ್ರೀಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳನ್ನು ಆವರಿಸಿದೆ. ಅಕ್ಕಪಕ್ಕದ ಅಂಗಡಿಗಳು ಜಲಾವೃತಗೊಂಡಿವೆ.
ಕಳೆದ 24 ಗಂಟೆಗಳಲ್ಲಿ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಆರು ಇಂಚಿಗೂ ಅಧಿಕ ಮಳೆಯಾಗಿದೆ. ಮಳೆಯ ಪ್ರಮಾಣ ಹೆಚ್ಚಾಗಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ವಿರಾಜಪೇಟೆ ಪಟ್ಟಣದ ಮುಖ್ಯ ರಸ್ತೆಗಳಿಗೆ ಪ್ರವಾಹದ ರೂಪದಲ್ಲಿ ನೀರು ನುಗ್ಗಿ ವರ್ತಕರು ಹಾಗೂ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿ ನಷ್ಟ ಉಂಟಾಗಿದೆ.
ಮನೆಗಳಿಗೆ ಹಾನಿ :
ಹೆಚ್ಚಿನ ಮಳೆಯಿಂದ ಮಡಿಕೇರಿ ತಾಲ್ಲೂಕು ಸಂಪಾಜೆ ಹೋಬಳಿ ಮದೆ ಗ್ರಾಮದ ಮನೋಹರಿ ಹಾಗೂ ಸಂಪಾಜೆ ಗ್ರಾಮದ ಬಂಡನ ಸರೋಜನಿ ಎಂಬುವರ ಮನೆಯ ಮುಂದಿನ ಬರೆ ಕುಸಿದಿದ್ದು, ಸೋಮವಾರಪೇಟೆ ತಾಲೂಕಿನ ಬಿಳಕಿಕೊಪ್ಪ ಗ್ರಾಮದ ಸರಸ್ವತಿ ಎಂಬವರ ಮನೆ ಮೇಲೆ ತೀವ್ರ ಮಳೆಯಿಂದ ಮರ ಬಿದ್ದು ಮನೆ ಹಾನಿಯಾಗಿದೆ.
ಕೊಡ್ಲಿಪೇಟೆ ಹೋಬಳಿ ಅವರೇದಾಳು ಗ್ರಾಮದ ಮೀನಾಕ್ಷಿ ರಂಗಯ್ಯ, ಯಾವಕಪಾಡಿ ಕಾಲೋನಿಯ ಕಾವೇರಿ, ಶ್ರೀಮಂಗಲ ಹೋಬಳಿ ಕೆ.ಬಾಡಗ ಗ್ರಾಮದ ಚಂದನಕೆರೆ ಹಾಡಿಯ ನಿವಾಸಿ ಮಧು, ಸೋಮವಾರಪೇಟೆ ಹೋಬಳಿಯ ನೇಗಳ್ಳಿ ಕರ್ಕಳ್ಳಿ ಗ್ರಾಮದ ಮುನಿಯಮ್ಮ, ಕೊಡ್ಲಿಪೇಟೆ ಹೋಬಳಿ ದೊಡ್ಡಕುಂದ ಗ್ರಾಮದ ಮೈಮುನ, ಕುಶಾಲನಗರ ತಾಲೂಕಿನ ಕುಶಾಲನಗರ ಹೋಬಳಿಯ ಬಸವನತ್ತೂರು ಗ್ರಾಮದ ಲಕ್ಷ್ಮಿ ಮಣಿ ಎಂಬುವರ ಮನೆ ಮೇಲ್ಚವಣಿ ಮುರಿದು ಬಿದ್ದಿದೆ.
ಸೋಮವಾರಪೇಟೆ ಹೋಬಳಿ ಮೂವತ್ತೋಕ್ಲು ಗ್ರಾಮದ ಜಾನು ಬೇಡು ಅವರ ಮನೆ ಗೋಡೆ ವ್ಯಾಪಕ ಮಳೆಯಿಂದ ಕುಸಿದಿದೆ. ಕುಶಾಲನಗರ ಹೋಬಳಿ ಮಾದಾಪಟ್ಟಣ ಗ್ರಾಮದ ನಿವಾಸಿ ಜಯಮ್ಮ ಅವರ ವಾಸದ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಹಾನಿಯಾಗಿದೆ. ಸೋಮವಾರಪೇಟೆ ಹೋಬಳಿಯ ದೊಡ್ಡಬೂರು ಗ್ರಾಮದ ಗೌರಿ ರಾಜು ಅವರ ವಾಸದ ಮನೆಯು ಭಾರಿ ಮಳೆ- ಗಾಳಿಗೆ ಮನೆಯ ಗೋಡೆ ಕುಸಿದಿದೆ.
ರಸ್ತೆ ಕುಸಿಯುವ ಭೀತಿ ಹಿನ್ನೆಲೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ತೆರಳುವ ರಸ್ತೆ ಬಂದ್ ಮಾಡಲಾಗಿದ್ದು, ಬದಲಿ ರಸ್ತೆಯಲ್ಲಿ ಸಂಚಾರ ಕಲ್ಪಿಸಲಾಗಿದೆ. ಕಗ್ಗೊಡ್ಲು ಬಿಳಿಗೇರಿ ರಸ್ತೆಯಲ್ಲಿ ಬಾಯಂಡಾ ಮನೆ ಹತ್ತಿರ ಸೇತುವೆಯ ಒಂದು ಬದಿ ಮಣ್ಣು ಕುಸಿಯುತ್ತಿದೆ. ಈ ಸಂಬಂಧ ಮುಂಜಾಗ್ರತ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬದಲಿ ರಸ್ತೆಯಾಗಿ ಮೇಕೇರಿ ಬಿಳಿಗಿರಿ ರಸ್ತೆ ಲಭ್ಯವಿದೆ.
ನೀರಿನ ಮಟ್ಟ ಏರಿಕೆ : ಬೇತ್ರಿಯಲ್ಲಿ ಕಾವೇರಿ ನದಿ ನೀರಿನ ಹರಿವು ಹೆಚ್ಚಾಗಿದ್ದು, ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕುಟ್ಟ, ಹರಿಹರ, ಇರ್ಪು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಲಕ್ಷ್ಮಣ ತೀರ್ಥ ನದಿ ಭರ್ತಿಯಾಗಿ ಬಾಳೆಲೆ ಸಮೀಪ ನಿಟ್ಟೂರು ಸೇತುವೆಯ ಪಕ್ಕದಲ್ಲಿ ನದಿಯ ಎರಡೂ ಬದಿಯ ಗದ್ದೆಗಳು ಮುಳುಗಡೆಯಾಗಿವೆ.
ಮಳೆ ವಿವರ :
ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 74.62 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 12.60 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1242.80 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 607.48 ಮಿ.ಮೀ ಮಳೆಯಾಗಿತ್ತು.
ಹಾರಂಗಿ ಜಲಾಶಯದ ನೀರಿನ ಮಟ್ಟ : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2852.82 ಅಡಿಗಳು. ಕಳೆದ ವರ್ಷ ಇದೇ ದಿನ 2845.73 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 14.60 ಮಿ.ಮೀ., ಕಳೆದ ವರ್ಷ ಇದೇ ದಿನ 3.20 ಮಿ.ಮೀ., ಇಂದಿನ ನೀರಿನ ಒಳಹರಿವು 10700 ಕ್ಯುಸೆಕ್, ಕಳೆದ ವರ್ಷ ಇದೇ ದಿನ 2811 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 10000 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 50 ಕ್ಯುಸೆಕ್.