ಕೊಡಗು ಜಿಲ್ಲೆಯ ವಿವಿಧೆಡೆ ತಂಪೆರೆದ ಮಳೆ
Update: 2024-04-12 15:58 GMT
ಮಡಿಕೇರಿ : ಅಧಿಕ ತಾಪಮಾನದಿಂದ ಕಂಗಾಲಾಗಿದ್ದ ಕೊಡಗು ಜಿಲ್ಲೆಯ ವಿವಿಧೆಡೆ ಇಂದು ಸಾಧಾರಣ ಮಳೆಯಾಗಿದ್ದು, ಕಳೆದ ಎರಡು ವಾರಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ಜನರು ಹಾಗೂ ಕೃಷಿಕ ವರ್ಗ ಕೊಂಚ ನೆಮ್ಮದಿ ಅನುಭವಿಸಿದ್ದಾರೆ.
ಮಡಿಕೇರಿ ನಗರದ ಕೆಲವು ಭಾಗ, ನಾಪೊಕ್ಲು, ಬೇತು, ಚೆರಿಯಪರಂಬು, ಕೊಳಕೇರಿ ಎಮ್ಮೆಮಾಡು, ನೆಲಜಿ ಬಲ್ಲಮಾವಟಿ, ಪಾರಾಣೆ, ಕೈಕಾಡು ಹೊದ್ದೂರು, ಮೂರ್ನಾಡು, ಮೇಕೇರಿ, ಬಿಳಿಗೇರಿ ಮೊದಲಾದೆಡೆ ಮಳೆಯಾಗಿದ್ದು, ಜನರಲ್ಲಿ ಸಂತಸ ಮೂಡಿದೆ.
ಒಂದೆಡೆ ಕೆರೆಯಲ್ಲೂ ನೀರಿಲ್ಲದೆ, ಮತ್ತೊಂದೆಡೆ ಮಳೆಯೂ ಆಗದೆ ಕಾಫಿ ಗಿಡಗಳು ಒಣಗುವ ಸ್ಥಿತಿಗೆ ಬಂದು ತಲುಪಿದ ಹಿನ್ನೆಲೆ ಬೆಳೆಗಾರರು ಚಿಂತಿತರಾಗಿದ್ದರು. ಆದರೆ ಇಂದು ಸುರಿದ ಸಾಧಾರಣ ಮಳೆ ಬೆಳೆಗಾರರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗಹುದೆನ್ನುವ ನಿರೀಕ್ಷೆಯಲ್ಲಿದ್ದಾರೆ.