ಡಿ.23, 24 ರಂದು ನೆಲ್ಲಿಹುದಿಕೇರಿಯಲ್ಲಿ ‘ಕೊಡಗು ಜಿಲ್ಲಾ ಸಾಹಿತ್ಯೋತ್ಸವ’

Update: 2023-12-20 10:16 GMT

ಮಡಿಕೇರಿ ಡಿ.20 : ಯುವ ಸಮೂಹದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ಸತ್ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಸುನ್ನಿ ಸ್ಟುಡೆಂಡ್ಸ್ ಫೆಡರೇಷನ್(ಎಸ್‍ಎಸ್‍ಎಫ್) ವತಿಯಿಂದ ಡಿ.23 ಮತ್ತು 24 ರಂದು ನೆಲ್ಲಿಹುದಿಕೇರಿಯಲ್ಲಿ ‘ಕೊಡಗು ಜಿಲ್ಲಾ ಸಾಹಿತ್ಯೋತ್ಸವ’ವನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಝುಬೈರ್ ಸಅದಿ ಮಾಲ್ದಾರೆ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಲಿಹುದಿಕೇರಿಯ ಶಾದಿ ಮಹಲ್‍ನಲ್ಲಿ ಡಿ.23 ರಂದು ಬೆಳಗ್ಗೆ 10 ಗಂಟೆಗೆ ಸಾಹಿತ್ಯೋತ್ಸವವನ್ನು ಎಂಎಲ್‍ಸಿ ವಿಶ್ವನಾಥ್ ಅವರು ಉದ್ಘಾಟಿಸಲಿದ್ದಾರೆ. ಬಳಿಕ ಜಿಲ್ಲಾ ವ್ಯಾಪ್ತಿಯ ವಿದ್ಯಾರ್ಥಿಗಳಿಗಾಗಿ 5 ಪ್ರತ್ಯೇಕ ವೇದಿಕೆಗಳಲ್ಲಿ 130 ಕ್ಕೂ ಹೆಚ್ಚಿನ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು, 10 ಮಂದಿ ತೀರ್ಪುಗಾರರು ಕಾರ್ಯನಿರ್ವಹಿಸಲಿದ್ದಾರೆ. ಸ್ಪರ್ಧೆಗಳು ಕನ್ನಡ, ಹಿಂದಿ, ಇಂಗ್ಲೀಷ್, ಮಲಯಾಳಂ, ಉರ್ದು ಮತ್ತು ಅರೇಬಿಕ್ ಭಾಷೆಗಳಲ್ಲಿ ನಡೆಯಲಿದೆ. ಅಂದು ಸಂಜೆ ಧಾರ್ಮಿಕ ಪ್ರವಚನ ನಡೆಯಲಿದೆಯೆಂದು ತಿಳಿಸಿದರು.

ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗುವ ಸ್ಪರ್ಧಿಗಳು ಭಟ್ಕಳದಲ್ಲಿ ನಡೆಯುವ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದು, ಅಲ್ಲಿ ಗೆಲುವು ಸಾಧಿಸುವವರು ಮುಂದಿನ ಸಾಲಿನ ಫೆಬ್ರವರಿಯಲ್ಲಿ ಆಂಧ್ರಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.

ಸಾಹಿತ್ಯೋತ್ಸವದ ದ್ವಿತೀಯ ದಿನವಾದ ಡಿ.24 ರಂದು ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ನಡೆಯುವ ಸಮಾರೋಪದಲ್ಲಿ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು, ಎಂಎಲ್‍ಸಿ ವಿಶ್ವನಾಥ್, ಡಾ. ಸುಶ್ರುತ್ ಗೌಡ, ಶಾಸಕರುಗಳಾದ ಡಾ. ಮಂತರ್ ಗೌಡ, ಎ.ಎಸ್. ಪೊನ್ನಣ್ಣ, ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದ್ ಶಿಹಾಬುದ್ದೀನ್ ಅಲ್ ಹೈದರೂಸಿ ಕಿಲ್ಲೂರು ತಂಙಳ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಮರ್ಕಝ್ ಕೊಟ್ಟಮುಡಿಯ ವ್ಯವಸ್ಥಾಪಕರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಇಲಿಯಾಸ್ ತಂಙಳ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‍ಎಸ್‍ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಜಿಲ್ಲಾ ಕಾರ್ಯದರ್ಶಿಗಳಾದ ರಫೀಕ್ ಲತೀಫಿ, ರಿಯಾಜ್, ಸದಸ್ಯರುಗಳಾದ ಹನೀಫ್ ಅಶ್ರಫಿ ಹಾಗೂ ಜಲೀಲ್ ಹೊಸತೋಟ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News