ಕೋಟ್ಯಾಂತ ರೂ. ಮೌಲ್ಯದ ಹೈಡ್ರೋ ಗಾಂಜಾ ವಶ : 7 ಆರೋಪಿಗಳ ಬಂಧನ
ಮಡಿಕೇರಿ: ಅಂತರ್ ರಾಷ್ಟ್ರೀಯ ಮಾದಕ ದಂಧೆ ಪ್ರಕರಣವನ್ನು ಭೇದಿಸಿರುವ ಕೊಡಗು ಪೊಲೀಸರು 7 ಆರೋಪಿಗಳನ್ನು ಬಂಧಿಸಿ, ಕೋಟ್ಯಾಂತರ ರೂ. ಮೌಲ್ಯದ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಕೊಡಗು ಜಿಲ್ಲೆಯ ಹೆಗ್ಗಳ ಗ್ರಾಮದ ನಾಸಿರುದ್ದೀನ್ ಎಂ.ಯು(26), ಎಡಪಾಲ ಗ್ರಾಮದ ಯಾಹ್ಯಾ ಸಿ.ಎಚ್(28), ಕುಂಜಿಲ ಗ್ರಾಮದ ಅಕನಾಸ್(26), ಬೇಟೋಳಿ ಗ್ರಾಮದ ವಾಜಿದ್(26), ಕೇರಳದ ನಿವಾಸಿ ರಿಯಾಝ್(44), ಕಾಸರಗೋಡಿನ ಮೆಹರೂಫ್(37) ಹಾಗೂ ರವೂಫ್(28) ಬಂಧಿತ ಆರೋಪಿಗಳು. ಇವರ ಬಳಿಯಿಂದ ಸುಮಾರು 3 ಕೋಟಿ ರೂ. ಮೌಲ್ಯದ 3.31 ಕೆ.ಜಿ ಹೈಡ್ರೋ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಹೈಡ್ರೋ ಗಾಂಜಾವನ್ನು ವಿಮಾನದ ಮೂಲಕ ಭಾರತ ಮತ್ತು ದುಬೈಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಅಂತರ ರಾಷ್ಟ್ರೀಯ ವ್ಯವಸ್ಥಿತ ಜಾಲವೊಂದನ್ನು ಕೊಡಗು ಪೊಲೀಸ್ ಅಧಿಕಾರಿಗಳು ಪತ್ತೆ ಹಚ್ಚಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ಹೆಮ್ಮೆ ವ್ಯಕ್ತಪಡಿಸಿದರು.
ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದಲ್ಲಿ ಕೆಫೆ ಇಟ್ಟುಕೊಂಡಿರುವ ಕೇರಳ ಮೂಲದ ಮಹಮ್ಮದ್ ಅನೂಫ್ ಎಂಬಾತ ಕೇರಳದ ಕಾಸರಗೋಡಿನ ಮೆಹರೂಫ್, ರವೂಫ್ ಹಾಗೂ ಕೊಡಗಿನ ಬಂಧಿತ ಯುವಕರ ಮೂಲಕ ಭಾರತ ಮತ್ತು ದುಬೈಗೆ ಹೈಡ್ರೋ ಗಾಂಜಾವನ್ನು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂದು ಎಸ್‍ಪಿ ತಿಳಿಸಿದರು.
ಆರೋಪಿ ಯಾಹ್ಯಾ ಬೆಂಗಳೂರಿನ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೈಡ್ರೋ ಗಾಂಜಾವನ್ನು ತಂದು ನಂತರ ಅಲ್ಲಿಂದ ನಾಸೀರುದ್ದೀನ್, ಆಕನಾಸ್, ರಿಯಾಜ್ ಹಾಗೂ ವಾಜೀದ್ ಅವರೊಂದಿಗೆ ಕಾರಿನಲ್ಲಿ ಗೋಣಿಕೊಪ್ಪದ ಬೆಳ್ಳಿಯಪ್ಪ ರೆಸಿಡೆನ್ಸಿಯೊಂದಕ್ಕೆ ಬಂದು ತಂಗುತ್ತಾರೆ. ಕೇರಳದ ಮೆಹರೂಫ್ ನ ಮುಂದಿನ ನಿರ್ದೇಶನಕ್ಕಾಗಿ ಕಾಯುತ್ತಿದ್ದ ತಂಡ ಒಂದೇ ಸ್ಥಳದಲ್ಲಿ ಇದ್ದರೆ ಯಾರಿಗಾದರೂ ಅನುಮಾನ ಬರುತ್ತದೆ ಎನ್ನುವ ಕಾರಣಕ್ಕೆ ಸ್ಥಳ ಬದಲಾವಣೆಗೆ ಮುಂದಾಗುತ್ತಾರೆ. ವಿರಾಜಪೇಟೆಯಿಂದ ಮಡಿಕೇರಿಗೆ ಬರುವಾಗ ಖಚಿತ ಮಾಹಿತಿ ದೊರೆತ ಹಿನ್ನೆಲೆ ಪೊಲೀಸ್ ಅಧಿಕಾರಿಗಳು ವಿರಾಜಪೇಟೆ ರಸ್ತೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು.
ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬ ಆರೋಪಿ ಆರ್ಜಿ ಗ್ರಾಮದ ರವೂಫ್ ನನ್ನು ಬೆಂಗಳೂರಿನ ಸಂಜಯನಗರ ಲೇಔಟ್ ನಿವಾಸದಲ್ಲಿ ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾದ ಕಾಸರಗೋಡಿನ ಮೆಹರೂಫ್ ಥೈಲ್ಯಾಂಡ್ ದೇಶದ ಬ್ಯಾಂಕಾಕ್ ಗೆ ಪರಾರಿಯಾಗಲು ಯತ್ನಿಸಿದಾಗ ಕೇರಳದ ಎರ್ನಾಕುಲಂ ಜಿಲ್ಲೆಯ ಎಸ್.ಪಿ. ವೈಭವ್ ಸಕ್ಸೇನಾ ಹಾಗೂ ಕೊಚ್ಚಿನ್ ಏರ್ ಪೋರ್ಟ್ ಇಮಿಗ್ರೇಶನ್ ಅಧಿಕಾರಿಯಾದ ಕೃಷ್ಣರಾಜ್ ಅವರ ಸಹಕಾರದಿಂದ ಬಂಧಿಸಲಾಯಿತು ಎಂದು ಎಸ್‍ಪಿ ವಿವರಿಸಿದರು.
ಅಧಿಕ ನಶೆ :
ಇದೊಂದು ಅಪರೂಪದ ಪ್ರಕರಣವಾಗಿದ್ದು, ಹೈಡ್ರೋ ಗಾಂಜಾ ಸಾಮಾನ್ಯ ಗಾಂಜಾಕ್ಕಿಂತ ಹೆಚ್ಚು ನಶೆಯನ್ನು ಕೊಡುವ ಮಾದಕ ದ್ರವ್ಯವಾಗಿದೆ ಮತ್ತು ದುಬಾರಿ ಬೆಲೆಯದ್ದಾಗಿದೆ. ಇದನ್ನು ವಿಭಿನ್ನ ರೀತಿಯ ಕೃತಕ ಬೆಳಕನ್ನು ಉಪಯೋಗಿಸಿ ಹವಾ ನಿಯಂತ್ರಿತ ಕೊಠಡಿಯಲ್ಲಿ ಬೆಳೆಸಲಾಗುತ್ತದೆ ಎಂದು ಎಸ್‍ಪಿ ಕೆ.ರಾಮರಾಜನ್ ಮಾಹಿತಿ ನೀಡಿದರು.
ಈ ಪ್ರಕರಣವನ್ನು ಕೊಡಗು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ಕೆ.ಎಸ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿ ರವಿಕುಮಾರ್ ಎಸ್. ಹಾಗೂ ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು ಪಿ.ಕೆ. ಅವರ ನೇತೃತ್ವದ ತಂಡ ಸತತ 72 ಗಂಟೆಗಳ ಕಾಲ ತನಿಖೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿ ಬೇಧಿಸಿದೆ.
ಡಿ.ಸಿ.ಆರ್.ಬಿ ಘಟಕದ ಪೊಲೀಸ್ ನಿರೀಕ್ಷಕ ಮೇದಪ್ಪ ಐ.ಪಿ, ಡಿವೈಎಸ್‍ಪಿ ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಯೋಗೇಶ್, ನಿರಂಜನ್, ಶರತ್ ರೈ, ರವಿಕುಮಾರ್, ನಾಪೊಕ್ಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ್, ಸಿಬ್ಬಂದಿಗಳಾದ ಪ್ರದೀಪ್ ಕುಮಾರ್, ಮುರುಳಿ, ನವೀನ್ ಜಿಲ್ಲಾ ಪೊಲೀಸ್ ಘಟಕದ ತಾಂತ್ರಿಕ ಸಿಬ್ಬಂದಿಗಳಾದ ರಾಜೇಶ್ ಸಿ.ಕೆ ಹಾಗೂ ಪ್ರವೀಣ್ ಕುಮಾರ್ ಕಾರ್ಯಾಚರಣೆ ನಡೆಸಿದರು.