ಕೊಡಗು ಪೊಲೀಸರ ಕಾರ್ಯಾಚರಣೆ; ವಿವಿಧ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳ ಬಂಧನ
ಮಡಿಕೇರಿ ಮಾ.16 : ಅಪರಾಧ ಕೃತ್ಯ ನಡೆಸಿ ಬಹಳ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
2007 ನೇ ಸಾಲಿನಲ್ಲಿ ಕಾಂತೂರು- ಮೂರ್ನಾಡು ನಿವಾಸಿ ಪದ್ಮಾವತಿ ಅವರ ಮನೆಗೆ ಪ್ರವೇಶಿಸಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಆರೋಪದಡಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಲೆ ಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿತ್ತು. ಮಾಹಿತಿ ಸಂಗ್ರಹಿಸಿದ ಪೊಲೀಸರು ಸುಮಾರು 16 ವರ್ಷಗಳ ನಂತರ ನಂಜರಾಯಪಟ್ಟಣ ಗ್ರಾಮದ ಆರೋಪಿ ಹೆಚ್.ಯು.ಚಂದ್ರಶೇಖರ್ (49) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2002 ನೇ ಸಾಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿ ಅರ್ಜಿ ಗ್ರಾಮದ ನಿವಾಸಿ ಮಣಿ (60) ಯನ್ನು 21 ವರ್ಷಗಳ ನಂತರ ಬಂಧಿಸಿದ್ದಾರೆ.
2002 ನೇ ಸಾಲಿನಲ್ಲಿ ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿನ ಗುಹ್ಯ ಗ್ರಾಮದ ಮಹಿಳೆಯೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿದ ಕುರಿತು ದೂರು ದಾಖಲಾಗಿತ್ತು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿ ದೊಡ್ಡ ಪುಲಿಕೋಟು ಗ್ರಾಮದ ನಿವಾಸಿ ಶಂಕರ (52) ಎಂಬಾತನನ್ನು ಸುಮಾರು 21 ವರ್ಷಗಳ ನಂತರ ಬಂಧಿಸಿದ್ದಾರೆ.
ಬಹಳ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಮಹೇಶ್ ಕುಮಾರ್.ಎಸ್, ಮಡಿಕೇರಿ ನಗರ ವೃತ್ತದ ಪಿಐ ರಾಜು.ಪಿ.ಕೆ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಉಮೇಶ್.ಯು, ಸಿದ್ದಾಪುರ ಠಾಣೆಯ ಪಿಎಸ್‍ಐ ರಾಘವೇಂದ್ರ ಹಾಗೂ ಸಿಬ್ಬಂದಿಗಳ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿತು. ಮೂರೂ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಯದಕ್ಷತೆ ತೋರಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘಿಸಿದ್ದಾರೆ.