ಕೊಡಗು: ಗಾಳಿಯ ರಭಸಕ್ಕೆ ಧರೆಗುರುಳಿದ ಬರೆ, ಮರಗಳು

Update: 2024-07-25 07:58 GMT

ಮಡಿಕೇರಿ ಜು.25 : ಕಳೆದ ಎರಡು ವಾರಗಳಿಂದ ಸುರಿದ ಮಹಾಮಳೆಗೆ ನಲುಗಿ ಹೋಗಿದ್ದ ಕೊಡಗು ಜಿಲ್ಲೆ ಈಗ ಗಾಳಿಯ ರಭಸಕ್ಕೆ ತತ್ತರಿಸಿ ಹೋಗಿದೆ. ಜಿಲ್ಲೆಯ ಬಹುತೇಕ ಕಡೆ ಎರಡು ದಿನಗಳಿಂದ ರಭಸವಾಗಿ ಗಾಳಿ ಬೀಸುತ್ತಿದ್ದು, ಬರೆಗಳು ಕುಸಿಯುತ್ತಿವೆ, ಮರಗಳು ಧರೆಗುರುಳುತ್ತಿವೆ.

ವಿದ್ಯುತ್ ಕಂಬಗಳು ಬಿದ್ದು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯ ಜೇಡಿಗುಂಡಿ ಎಂಬಲ್ಲಿ ಬೃಹತ್ ಬರೆ ಕುಸಿದು ಬಿದ್ದಿದೆ. ಇದೇ ಮಾರ್ಗದಿಂದ ಹಾದು ಹೋಗುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಅಪಾಯದಿಂದ ಪಾರಾಗಿದೆ. ಮಣ್ಣು ಕುಸಿಯುತ್ತಿದ್ದಂತೆ ಚಾಲಕ ಬಸ್ ಅನ್ನು ನಿಲ್ಲಿಸಿದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ. ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಸೋಮವಾರಪೇಟೆಯ ಹಾನಗಲ್ಲು ವ್ಯಾಪ್ತಿಯ ಕಲ್ಕಂದೂರು ಗ್ರಾಮದಲ್ಲಿ ಮನೆಯೊಂದರ ಮೇಲೆ ಬೃಹತ್ ಮರ ಬಿದ್ದು ಹಾನಿಯಾಗಿದೆ. ಪ್ರವೀಣ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

ಮಡಿಕೇರಿ ತಾಲ್ಲೂಕಿನ ಕರಿಕೆ- ಭಾಗಮಂಡಲ ರಸ್ತೆಯಲ್ಲಿ ಬೃಹತ್ ಮರ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ನಂತರ ತೆರವು ಕಾರ್ಯಾಚರಣೆ ನಡೆಯಿತು. ಕರಿಕೆಯ ಕುಂಡತ್ತಿಕಾನ ಗ್ರಾಮದಲ್ಲಿ ಕೆ.ಎಸ್.ಗಣೇಶ ಎಂಬುವವರ ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿಯಾಗಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

ಪೊನ್ನಂಪೇಟೆಯ ಕುಂದರಸ್ತೆಯ ಕಾವೇರಿ ನಗರದ ನಿವಾಸಿ ಎಸ್.ಕೆ.ಸುರೇಶ್ ಎಂಬುವವರ ಮನೆಯ ಹಿಂಭಾಗದಲ್ಲಿದ್ದ ಭಾರೀ ಗಾತ್ರದ ಮರ ಬಿದ್ದು ಮನೆಗೆ ಹಾನಿಯಾಗಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಗ್ರಾ.ಪಂ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ದಕ್ಷಿಣ ಕೊಡಗಿನ ಬೆಸಗೂರು ನಲ್ಲೂರು ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಲ್ಲದೆ ವಿದ್ಯುತ್ ಮಾರ್ಗಕ್ಕೂ ಹಾನಿಯಾಗಿದೆ. ಈ ಭಾಗದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಒಣಗಿದ ಮರಗಳಿದ್ದು, ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಅನೇಕ ಕಡೆ ಮರಗಳು ಬೀಳುತ್ತಿವೆ. ಜಿಲ್ಲಾವ್ಯಾಪಿ ಗಾಳಿಯ ರಭಸಕ್ಕೆ ಆತಂಕ ಸೃಷ್ಟಿಯಾಗಿದೆ.

::: ವಿದ್ಯಾರ್ಥಿಗಳಲ್ಲಿ ಗೊಂದಲ :::

ಗಾಳಿಯ ರಭಸಕ್ಕೆ ಅಪಾಯದ ಮುನ್ಸೂಚನೆ ಇದ್ದ ಕಾರಣ ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಶಾಲೆಗಳಿಗೆ ಬೆಳಿಗ್ಗೆ ರಜೆ ಘೋಷಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಕೆಲವು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸುರಿಯುವ ಮಳೆಯ ನಡುವೆ ಶಾಲೆಗೆ ಬಂದು ಮತ್ತೆ ಮನೆಗೆ ಮರಳಿದ್ದಾರೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಿಕ್ಷಣಾಧಿಕಾರಿಗಳು ಸಕಾಲದಲ್ಲಿ ಸಂಜೆಯೇ ರಜೆ ಘೋಷಣೆ ಮಾಡಬೇಕು ಎಂದ ಪೋಷಕರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News