ವಿಶ್ವ ಜೂನಿಯರ್ ಚಾಂಪಿಯನ್ ಶಿಪ್ ಗೆ ಕೊಡಗಿನ ಉನ್ನತಿ ಆಯ್ಕೆ
ಮಡಿಕೇರಿ ಮೇ 15 : ಉದಯೋನ್ಮುಖ ಕ್ರೀಡಾ ಪ್ರತಿಭೆ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಇದೀಗ ತಮ್ಮ ಕ್ರೀಡಾ ಸಾಧನೆಗೆ ಹೊಸದೊಂದು ಗರಿ ಮೂಡಿಸಿಕೊಂಡಿದ್ದಾರೆ.
18ರ ವಯೋಮಿತಿಯಲ್ಲಿ ಉನ್ನತಿ ಇದೀಗ ಸೀನಿಯರ್ ವಿಮೆನ್ಸ್ ವಿಭಾಗದಲ್ಲಿ ಸ್ಪರ್ಧಿಸಿ 200 ಮೀಟರ್ ಹರ್ಡಲ್ಸ್ ನಲ್ಲಿ ಸೀನಿಯರ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕದ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಭುವನೇಶ್ವರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಕಪ್ ಕ್ರೀಡಾಕೂಟದಲ್ಲಿ ಉನ್ನತಿ ಸ್ಪರ್ಧಿಸಿ 200 ಮೀಟರ್ಸ್ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಅಂತರವನ್ನು 23.85 ಸೆಕೆಂಡ್ ನಲ್ಲಿ ಕ್ರಮಿಸುವ ಮೂಲಕ ವೃತ್ತಿ ಜೀವನದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ 2024ರ ಆಗಸ್ಟ್ ನಲ್ಲಿ ಪೆರುವಿನಲ್ಲಿ ನಡೆಯಲಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ಗೆ ಇವರು ಅರ್ಹತೆಗಳಿಸಿದ್ದು, ದೇಶವನ್ನು ಪ್ರತಿನಿಧಿಸಲಿದ್ದಾರೆ.
ಇತ್ತೀಚಿಗೆ ದುಬೈನಲ್ಲಿ ನಡೆದ ಜೂನಿಯರ್ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 100 ಮೀಟರ್ ಹರ್ಡಲ್ಸ್ ನಲ್ಲಿ ಇವರು ಕಂಚಿನ ಪದಕಗಳಿಸಿದ್ದರು. ಇದೀಗ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 200 ಮೀಟರ್ ಹಾಗೂ 100 ಮೀಟರ್ ಹರ್ಡಲ್ಸ್ ಈ ಎರಡೂ ವಿಭಾಗದಲ್ಲೂ ಇವರು ಸ್ಪರ್ಧಿಸಲಿದ್ದಾರೆ. ಉನ್ನತಿ ಮೂಲತಃ ಮಡಿಕೇರಿ ನಿವಾಸಿ ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ ದಂಪತಿಯ ಪುತ್ರಿ.