ಕುಶಾಲನಗರ: ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ : ಸಚಿವ ದಿನೇಶ್ ಗುಂಡೂರಾವ್ ಭರವಸೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನೂತನವಾಗಿ ರಚನೆಯಾಗಿರುವ ತಾಲ್ಲೂಕುಗಳಲ್ಲಿ ಒಂದಾಗಿರುವ ‘ಕುಶಾಲನಗರ ತಾಲ್ಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಗರದ ಬ್ರಾಹ್ಮಣ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿತ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು,ಕುಶಾಲನಗರ ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ತಾನು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಲ್ಲದೆ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮೂಲಕ ಸ್ಥಳೀಯ ಬ್ರಾಹ್ಮಣರ ಸಂಘಕ್ಕೆ ಸಹಕಾರ ನೀಡಲಾಗುವುದೆಂದು ಹೇಳಿದರು.
ಆರೋಗ್ಯ ಕೇಂದ್ರ ಮೇಲ್ದರ್ಜೆಗೆ: ಊರಿನ ಆರೋಗ್ಯ ಕೇಂದ್ರದ ಮೇಲ್ದರ್ಜೆಗೆ ಎಲ್ಲ ರೀತಿಯ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುವುದು. ರಥ ಬೀದಿಯಲ್ಲಿರುವ ಬ್ರಾಹ್ಮಣ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನೆರವು ಒದಗಿಸಲಾಗುವುದು. ಕುಶಾಲನಗರ ತಾಲೂಕು ಆಸ್ಪತ್ರೆಗೆ 100 ಬೆಡ್ ಕಲ್ಪಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಜೊತೆಗೆ ಡಯಾಲಿಸಿಸ್ ಕೇಂದ್ರ ಮುಂದಿನ ತಿಂಗಳು ಸೇವೆಗೆ ಲಭ್ಯವಾಗಲಿದೆ ಎಂದರು.
ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಮಿನಿ ವಿಮಾನ ನಿಲ್ದಾಣ ರೈಲ್ವೆ ಯೋಜನೆಗಳ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಎಲ್ಲಾ ಸಹಕಾರ ನೀಡಲಾಗುವುದು ಎಂದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಗುಂಡೂರಾಯರ ಹಳೆಯ ನಿವಾಸ ಪ್ರಸಕ್ತ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಾಗಿದ್ದು, ಭವ್ಯ ಭವನ ನಿರ್ಮಾಣಕ್ಕೆ ತನ್ನ ಪಾಲಿನ ಅನುದಾನ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆ. ಎಸ್.ರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ವಕೀಲರಾದ ಆರ್.ಕೆ. ನಾಗೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕುಶಾಲನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕೂಡಿಗೆ ಭಾಗದಲ್ಲಿ ಕೃಷಿ ಕಾಲೇಜು ಸೇರಿದಂತೆ ಬ್ರಾಹ್ಮಣ ಸಮಾಜಕ್ಕೆ ಕುಶಾಲನಗರದಲ್ಲಿ ಸುಸಜ್ಜಿತ ಸಭಾಂಗಣ ಒಂದನ್ನು ನಿರ್ಮಿಸಲು ಸಹಕರಿಸುವಂತೆ ಸಚಿವರಿಗೆ ಮನವಿ ಮಾಡಿದರು.