ಮಡಿಕೇರಿ | ಅಕ್ರಮ ನಾಡ ಬಂದೂಕು ತಯಾರಿ : ಆರೋಪಿ, ಖರೀದಿದಾರರ ಬಂಧನ

Update: 2024-08-15 17:23 GMT

ವಶಪಡಿಸಿಕೊಂಡ ನಾಡ ಬಂದೂಕು

ಮಡಿಕೇರಿ : ತಾಲ್ಲೂಕಿನ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣಪುಲಿಕೋಟು ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿ ಹಾಗೂ ಬಂದೂಕು ಖರೀದಿ ಮಾಡಿದ ವ್ಯಕ್ತಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

ಸಣ್ಣಪುಲಿಕೋಟು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೇರಳದ ಇಡುಕ್ಕಿ ಮೂಲದ ಸುರೇಶ್ (52) ಎಂಬಾತನೇ ಬಂಧಿತ ಆರೋಪಿ. ಈತನ ಮನೆ ಮೇಲೆ ದಾಳಿ ಮಾಡಿದಾಗ ಅಕ್ರಮವಾಗಿ ನಾಡ ಬಂದೂಕು ತಯಾರಿಸಲು ಬಳಸುತ್ತಿದ್ದ ಸಾಮಾಗ್ರಿಗಳು, 2 ನಾಡ ಬಂದೂಕು(ಎಸ್.ಬಿ.ಬಿ.ಎಲ್) ಮತ್ತು 1 ನಾಡ ಪಿಸ್ತೂಲ್ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶ ಪಡಿಸಿಕೊಂಡಿದ್ದಾರೆ.

ಆರೋಪಿ ಸುರೇಶ್ ಅಕ್ರಮವಾಗಿ ತಯಾರಿಸಿರುವ ನಾಡ ಬಂದೂಕುಗಳನ್ನು ಖರೀದಿ ಮಾಡಿದ್ದ ಎನ್.ಜೆ.ಶಿವರಾಮ (45), ಎಸ್.ರವಿ (35) ಹಾಗೂ ಕೋಟಿ (55) ಅವರನ್ನು ಕೂಡ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇವರ ಬಳಿ ಇದ್ದ ತಲಾ ಒಂದು ನಾಡ ಬಂದೂಕು (ಎಸ್.ಬಿ.ಬಿ.ಎಲ್) ಅನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಒಟ್ಟು 5 ನಾಡ ಬಂದೂಕು(ಎಸ್.ಬಿ.ಬಿ.ಎಲ್) ಮತ್ತು 1 ನಾಡ ಪಿಸ್ತೂಲ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಭಾಗಮಂಡಲ ಠಾಣೆ ಪಿಎಸ್‍ಐ ಶೋಭಾ ಲಾಮಾಣಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News