ಮಡಿಕೇರಿ | ಕಾಡುಕೋಣ ದಾಳಿ : ವ್ಯಕ್ತಿಗೆ ಗಂಭೀರ ಗಾಯ
ಮಡಿಕೇರಿ: ಕಾಡುಕೋಣವೊಂದು ದಾಳಿ ಮಾಡಿದ ಪರಿಣಾಮ ಹಾಡಿ ನಿವಾಸಿಯೊಬ್ಬರು ಗಾಯಗೊಂಡಿರುವ ಘಟನೆ ತಿತಿಮತಿ ಸಮೀಪದ ಬೊಗ್ಗನ ಹಡ್ಲು ಎಂಬಲ್ಲಿ ನಡೆದಿದೆ.
ಗಾಯಗೊಂಡಿರುವ ವ್ಯಕ್ತಿಯನ್ನು ಜೇನುಕುರುಬರ ತಿಮ್ಮ(45) ಎಂದು ಗುರುತಿಸಲಾಗಿದೆ. ತಿಮ್ಮ ಎಂದಿನಂತೆ ಮನೆ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭ ಏಕಾಏಕಿ ಕಾಡುಕೋಣ ದಾಳಿ ಮಾಡಿದೆ ಎನ್ನಲಾಗಿದ್ದು, ಕೊಂಬಿನಿಂದ ತಿವಿದ ಪರಿಣಾಮ ತಿಮ್ಮ ಅವರ ಎಡ ಕಾಲಿಗೆ ಗಂಭೀರ ಗಾಯವಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ತಿಮ್ಮ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಷಯ ತಿಳಿದ ತಕ್ಷಣ ಸ್ಪಂದಿಸಿದ ರಾಜ್ಯ ವನ್ಯಜೀವಿ ಸಂರಕ್ಷಣಾ ಸಮಿತಿ ಸದಸ್ಯ ಸಂಕೇತ್ ಪೂವಯ್ಯ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಯೋಗ ಕ್ಷೇಮ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡುಕೋಣ ದಾಳಿ ನಡೆಸಿರುವ ಕುರಿತು ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ಗಮನಕ್ಕೆ ತರಲಾಗಿದೆ. ಗಾಯಾಳುವಿಗೆ ಸೂಕ್ತ ಚಿಕಿತ್ಸೆ ದೊರಕಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ವೈದ್ಯರಿಗೆ ಶಾಸಕರು ಸೂಚಿಸಿದ್ದಾರೆ. ವೈದ್ಯರು ಗಾಯಾಳುವಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಿದಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.