ಭರವಸೆಗಳನ್ನು ಈಡೇರಿಸದ ಸಂಸದ ಪ್ರತಾಪ್ ಸಿಂಹ ಸುಳ್ಳು ಹೇಳುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ : ಎಂ.ಲಕ್ಷ್ಮಣ್ ಟೀಕೆ
ಮಡಿಕೇರಿ ಜ.31 : ಕೊಡಗು ಜಿಲ್ಲೆಗೆ ತಾವು ನೀಡಿದ ಭರವಸೆಗಳನ್ನು ಈಡೇರಿಸಲಾಗದ ಸಂಸದ ಪ್ರತಾಪ್ ಸಿಂಹ ಅವರು ಸುಳ್ಳು ಹೇಳುವ ಮೂಲಕ ಪಲಾಯನವಾದ ಮಂಡಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಗೆ ನೀಡಿರುವ ಭರವಸೆಗಳು ಈಡೇರದೆ ಇರುವ ಬಗ್ಗೆ ಮೊದಲು ಸಂಸದರು ಉತ್ತರಿಸಲಿ. ರಾಜ್ಯ ಕಾಂಗ್ರೆಸ್ ಸರ್ಕಾರ ಕೊಡಗು ಜಿಲ್ಲೆಗೆ ಘೋಷಿಸಿದ 350 ಕೋಟಿ ರೂ. ವೆಚ್ಚದ ಕಾಮಗಾರಿಗಳ ಬಗ್ಗೆ ಟೀಕೆ ಮಾಡುವ ಬದಲು ಬಹಿರಂಗ ಚರ್ಚೆಗೆ ಬರಲಿ ಎಂದರು.
ಕಾಫಿ ಬೆಳೆಗೆ ರಾಷ್ಟ್ರೀಯ ಪಾನೀಯದ ಮಾನ್ಯತೆ, ಕುಶಾಲನಗರದವರೆಗೆ ರೈಲು ಮಾರ್ಗ, ಸೇನಾ ಕ್ಷೇತ್ರದಲ್ಲಿ ಕೂರ್ಗ್ ರಿಜಿಮೆಂಟ್ ರಚನೆ, ಕೊಡವ ಭಾಷೆಯನ್ನು 8ನೇ ಶೆಡ್ಯುಲ್‍ಗೆ ಸೇರಿಸುವುದು ಈ ಭರವಸೆಗಳು ಇನ್ನೂ ಕೂಡ ಈಡೇರಿಲ್ಲ. ಅಲ್ಲದೆ ಇತ್ತೀಚೆಗೆ ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರದ ಬಗ್ಗೆ ಸಂಸದರು ಭರವಸೆ ನೀಡಿದ್ದಾರೆ. ಪ್ರತ್ಯೇಕ ಕ್ಷೇತ್ರವಾಗಬೇಕಾದರೆ 20 ಲಕ್ಷ ಮತದಾರರು ಇರಬೇಕು. ಇದು ಸೇರಿದಂತೆ ಎಲ್ಲಾ ವಿಚಾರದಲ್ಲೂ ಪ್ರತಾಪ್ ಸಿಂಹ ಅವರು ಸುಳ್ಳು ಹೇಳುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೈದಾಕ್ಷಣ ಪ್ರತಾಪ್ ಸಿಂಹ ಅವರು ಹೀರೋ ಆಗುವುದಿಲ್ಲ. ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಹೇಳಿ ಚುನಾವಣೆ ಎದುರಿಸುವುದನ್ನು ಬಿಟ್ಟು ಜಾತಿ, ಜಾತಿಗಳ ನಡುವೆ ಒಡಕು ಮೂಡಿಸಿ, ಕೋಮು ಸಂಘರ್ಷ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ಜನರು ಪ್ರಜ್ಞಾವಂತರಾಗಿದ್ದು, ಪ್ರತಾಪ್ ಸಿಂಹ ಅವರು ಸೋಲುವುದು ಖಚಿತವಾಗಿದೆ. ಪ್ರತಾಪ್ ಸಿಂಹ ಅವರಿಗೇ ಮತ್ತೆ ಟಿಕೆಟ್ ಸಿಗಬೇಕೆನ್ನುವುದು ನಮ್ಮ ಅಭಿಲಾಷೆಯಾಗಿದೆ. ಯಾಕೆಂದರೆ ಈ ಬಾರಿ ವರ ಎದುರು ಕಾಂಗ್ರೆಸ್ ಅಭ್ಯರ್ಥಿ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತವಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಮುಂದಾಗಿದ್ದು, ಕರಾವಳಿಯ ಕೋಮು ಪ್ರಯೋಗಾಲಯವನ್ನು ಮಂಡ್ಯದಲ್ಲಿ ಪ್ರಯೋಗಿಸಲು ಮುಂದಾಗಿದೆ. ಹಸಿರು ಶಾಲಿಗೆ ಹೆಸರುವಾಸಿಯಾಗಿದ್ದ ಮಂಡ್ಯದಲ್ಲಿ ಈಗ ಕೇಸರಿ ಸಾಲನ್ನು ಪ್ರಯೋಗಿಸುತ್ತಿದ್ದಾರೆ. ರಾಜ್ಯದ ರೈತರು ಹಾಗೂ ಜನರು ಬರದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರದ ಬರ ಅಧ್ಯಯನ ತಂಡ ರಾಜ್ಯದಲ್ಲಿ 35 ಸಾವಿರ ಕೋಟಿ ರೂ.ನಷ್ಟು ನಷ್ಟ ಸಂಭವಿಸಿದೆ ಎಂದು ವರದಿ ನೀಡಿದರು ಕೇಂದ್ರ ಇಲ್ಲಿಯವರೆಗೆ 35 ಪೈಸೆಯನ್ನು ಕೂಡ ಪರಿಹಾರವಾಗಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರು ದಿನದ ಹದಿನೆಂಟು ಗಂಟೆ ದುಡಿಯುತ್ತಿದ್ದಾರೆ, ದೇಶ ಅಭಿವೃದ್ಧಿ ಹೊಂದುತ್ತಿದೆ ಎಂದು ಬಿಜೆಪಿ ಮಂದಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕಾಣುತ್ತಿಲ್ಲ, ಬದಲಿಗೆ ಪ್ರತಿಯೊಬ್ಬ ಪ್ರಜೆಯ ತಲೆಗೆ 4.50 ಲಕ್ಷ ರೂ. ಸಾಲದ ಹೊರೆಯನ್ನು ಹಾಕಿದ್ದಾರೆ. ಇದೇ ಕೇಂದ್ರ ಸರ್ಕಾರದ ಸಾಧನೆ. 2014 ಮಾರ್ಚ್ ತಿಂಗಳವರೆಗೆ ದೇಶದ ಸಾಲ ರೂ.53.11 ಲಕ್ಷ ಕೋಟಿ ಇತ್ತು. ಆದರೆ ಈಗ ಈ ಮೊತ್ತ ರೂ.173 ಲಕ್ಷ ಕೋಟಿಯಾಗಿದೆ. ರೂ.25 ಲಕ್ಷ ಕೋಟಿಯಷ್ಟು ಆರ್‍ಬಿಐ ಸಾಲ ಸೇರಿ ಕಳೆದ ಹತ್ತು ವರ್ಷಗಳಲ್ಲಿ ಸಾಲದ ಮೊತ್ತ ಒಟ್ಟು 258 ಲಕ್ಷ ಕೋಟಿಯಾಗಿದೆ. ಕರ್ನಾಟಕ ರಾಜ್ಯ ತೆರಿಗೆ ವಸೂಲಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ವಾರ್ಷಿಕ ಕೇಂದ್ರಕ್ಕೆ 4 ಲಕ್ಷದ 81 ಸಾವಿರ ಕೋಟಿ ರೂ. ತೆರಿಗೆಯನ್ನು ಪಾವತಿಸುತ್ತಿದೆ. ನೀತಿ ಆಯೋಗದ ಪ್ರಕಾರ ಶೇ.40 ರಷ್ಟು ಹಣವನ್ನು ನಮ್ಮ ರಾಜ್ಯಕ್ಕೆ ನೀಡಬೇಕಿತ್ತು, ಆದರೆ ಕೇಂದ್ರ ಕೇವಲ ಶೇ.10 ರಷ್ಟು ನೀಡಿದೆ. ಕೇಂದ್ರದ ಬಿಜೆಪಿ ಸರ್ಕಾರ ನಿರಂತರವಾಗಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಹಾಗೂ ಮಾಧ್ಯಮ ಸಂಯೋಜಕ ಮಹೇಶ್ ಮೈಸೂರು ಉಪಸ್ಥಿತರಿದ್ದರು.
ಇದೇ ಸಂದರ್ಭ ಲಕ್ಷ್ಮಣ್ ಅವರು ಕೇಂದ್ರ ಸರ್ಕಾರದಿಂದ ಕಳೆದ 5ವರ್ಷಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯಗಳು ಎಂಬ ಪತ್ರವನ್ನು ಬಿಡುಗಡೆ ಮಾಡಿದರು.