ಕೊಡಗು ಕಾಂಗ್ರೆಸ್ ಮುಖಂಡರಿಗಿಲ್ಲ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ

Update: 2024-03-04 06:52 GMT

ಮಡಿಕೇರಿ, ಮಾ.4: ರಾಜ್ಯದಲ್ಲಿ 44 ಮಂದಿಯನ್ನು ನಿಗಮ ಮಂಡಳಿ,ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ 2 ವರ್ಷಗಳವರೆಗೆ ನೇಮಿಸಿ ರಾಜ್ಯ ಸರಕಾರದ ಆದೇಶ ಹೊರಡಿಸಿದ್ದು, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಕಾಂಗ್ರೆಸ್ ಮುಖಂಡರು ಹಾಗೂ ಹಿರಿಯ ಕಾರ್ಯಕರ್ತರಿಗೆ ಹುದ್ದೆ ಭಾಗ್ಯ ದೊರೆತಿವೆ. ಆದರೆ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಯಾವುದೇ ನಿಗಮ,ಪ್ರಾಧಿಕಾರದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಭಾಗ್ಯ ಕೂಡಿ ಬಂದಿಲ್ಲ.

ಕಳೆದ ಎರಡು ದಶಕಗಳ ಬಳಿಕ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಯಾವುದೇ ಅಪಸ್ವರವಿಲ್ಲದೆ ಮುಖಂಡರು,ಕಾರ್ಯಕರ್ತರು ಚುನಾವಣೆಯನ್ನು ಎದುರಿಸಿ ಪಕ್ಷದ ಪರ ದುಡಿದು ಗೆಲುವಿಗೆ ಕಾರಣರಾಗಿದ್ದರು. ಕೊಡಗಿಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ದೊಡ್ಡದಾಗಿ ಕೇಳಿ ಬಂದಿತ್ತು. ಆದರೆ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ರಾಜ್ಯದಲ್ಲಿ ಸಚಿವ ಸ್ಥಾನ ನೀಡಲಿಲ್ಲ. ಆದರೆ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ದರ್ಜೆ ಕಾನೂನು ಸಲಹೆಗಾರರಾಗಿ ನೇಮಿಸಲಾಗಿತ್ತು.

ಮೊದಲ ಹಂತದಲ್ಲಿ 36 ಹಿರಿಯ ಶಾಸಕರು ಹಾಗೂ ಸಚಿವ ಸ್ಥಾನ ಕೈತಪ್ಪಿದ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಎರಡನೇ ಹಂತದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಣೆ ಹಾಕಿರುವ ಕಾಂಗ್ರೆಸ್ ಸರಕಾರ ಕೊಡಗು ಜಿಲ್ಲೆಯ ಯಾವೊಬ್ಬ ಮುಖಂಡ ಹಾಗೂ ಕಾರ್ಯಕರ್ತರಿಗೆ ನಿಗಮ,ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡಲಿಲ್ಲ. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ಕೊಡಗು ಮೂಲದ ಮೆಹರೋಜ್ ಖಾನ್ ಅವರಿಗೆ ಮಣೆ ಹಾಕಲಾಗಿದೆ.

ಮೊದಲ ಹಂತದಲ್ಲಿ ಬೇರೆ ಜಿಲ್ಲೆಗಳ ಹಿರಿಯ ಕಾಂಗ್ರೆಸ್ ಮುಖಂಡರಿಗೆ ನಿಗಮ ಮಂಡಳಿ,ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಎರಡು ವರ್ಷಗಳ ನಂತರ ಅಥವಾ ಇದರ ಮಧ್ಯದಲ್ಲಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದೆಂದು ಹೈಕಮಾಂಡ್ ಭರವಸೆ ನೀಡಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಹಿರಿಯ ಮುಖಂಡರು ಹಾಗೂ ಪಕ್ಷಕ್ಕೆ ದುಡಿದವರಿಗೆ ನಿಗಮ, ಪ್ರಾಧಿಕಾರ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಹೈಕಮಾಂಡ್ಗೆ ಒತ್ತಡ ಹಾಕಲಾಗುವುದು. ಜಿಲ್ಲೆಯಲ್ಲಿ ಇಬ್ಬರು ಶಾಸಕರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಎಸ್. ಪೊನ್ನಣ್ಣ ಅವರಿಗೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಹುದ್ದೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ದೊರೆಯಲಿದೆ.

-ತಿತೀರ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ

2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಗೆಲುವು ಸಾಧಿಸಿದ್ದರು. ಆ ಅವಧಿಯಲ್ಲಿ ಶಾಂತೆಯಂಡ ವೀಣಾ ಅಚ್ಚಯ್ಯ ಅವರಿಗೆ 18 ತಿಂಗಳ ಅವಧಿಗೆ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ, ನಂತರ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಲಾಗಿತ್ತು. ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರಿಗೆ ಜಾತಿವಾರು ಲೆಕ್ಕಾಚಾರದಲ್ಲಿ ಮೈಸೂರು ತಂಬಾಕು ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷರಾಗಿ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರನ್ನು ನೇಮಿಸಲಾಗಿತ್ತು.

ಬಿಜೆಪಿ ಸರಕಾರದ ಅವಧಿಯಲ್ಲಿ ಶಾಂತೆಯಂಡ ರವಿ ಕುಶಾಲಪ್ಪಅವರನ್ನು ಪಶ್ಚಿಮಘಟ್ಟಗಳ ಸಂರಕ್ಷಣಾ ಪಡೆಯ ಅಧ್ಯಕ್ಷರಾಗಿ ಹಾಗೂ ಈಗಿನ ಬಿಜೆಪಿ ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Naufal

contributor

Contributor - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News