ಕೊಡಗು : ಭಾರೀ ಗಾಳಿ ಮಳೆ; ಭೂಕುಸಿತ ಪ್ರದೇಶದ ಹಲವು ಕುಟುಂಬಗಳ ಸ್ಥಳಾಂತರ

Update: 2024-07-31 08:59 GMT

ಮಡಿಕೇರಿ ಜು.31 : ಭಾರೀ ಗಾಳಿ ಮಳೆಯ ಹಿನ್ನೆಲೆ ಕೊಡಗು ಜಿಲ್ಲೆಯ ವಿವಿಧ ಭಾಗಗಳ ಹಲವು ಕುಟುಂಬಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಭಾಗಮಂಡಲ ಹೋಬಳಿಯ ಭಾಗಮಂಡಲ ಗ್ರಾಮದ ಕಾಶಿ ಮಠದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಎರಡು ಕುಟುಂಬಗಳ ಏಳು ಸದಸ್ಯರು ಆಶ್ರಯ ಪಡೆದಿದ್ದಾರೆ. ವಿರಾಜಪೇಟೆ ತಾಲ್ಲೂಕು ಕರಡಿಗೋಡು ಗ್ರಾಮದ ಕಾವೇರಿ ನದಿ ದಡ ವ್ಯಾಪ್ತಿಯ ಹೊಳೆ ಕೆರೆ ಪೈಸಾರಿಯ ಪ್ರವಾಹದ ಅಪಾಯದ ಭೀತಿಯಲ್ಲಿರುವ ಕುಟುಂಬಗಳನ್ನು ಸಿದ್ದಾಪುರ ಸ್ವರ್ಣ ಮಾಲ ಕಲ್ಯಾಣ ಮಂಟಪಕ್ಕೆ ಭಾಗಶಃ ಸ್ಥಳಾಂತರಿಸಲಾಗಿದೆ.

ವಿರಾಜಪೇಟೆ ಹೋಬಳಿ ತೋರ ಗ್ರಾಮದ ಭೂಕುಸಿತ ಪ್ರದೇಶದಲ್ಲಿರುವ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮಡಿಕೇರಿಯ ಇಂದಿರಾ ನಗರದಲ್ಲಿ ಎರಡು ಮನೆಗಳು ಅಪಾಯ ಸ್ಥಿತಿಯಲ್ಲಿದ್ದು, ಸದ್ರಿ ಮನೆಗಳಲ್ಲಿ ವಾಸಿಸುವವರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ತಿಳಿಸಲಾಗಿದೆ ಹಾಗೂ ಇಂದಿರಾ ನಗರದಲ್ಲಿರುವ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಇರುವಂತೆ ತಿಳಿಸಲಾಗಿದೆ. ಸಮುದಾಯ ಭವನದ ಸಮಿತಿಗೂ ಈ ಮಾಹಿತಿ ನೀಡಿ ಎರಡು ಕುಟುಂಬಗಳು ತಾತ್ಕಾಲಿಕವಾಗಿ ಇರುವಂತೆ ವ್ಯವಸ್ಥೆ ಮಾಡಲಾಗಿದೆ.

ಕುಶಾಲನಗರ ತಾಲ್ಲೂಕಿನ ಕುಶಾಲನಗರ ಹೋಬಳಿಯ ವಾಲ್ನೂರು ತ್ಯಾಗತ್ತೂರು ಗ್ರಾಮದ ಹೊಳೆ ಪಕ್ಕದ ಕುಟುಂಬದವರನ್ನು ಸ.ಹಿ.ಪ್ರಾ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 6 ಕುಟುಂಬಗಳ ಒಟ್ಟು 23 ಸದಸ್ಯರು ಕಾಳಜಿ ಕೇಂದ್ರದ ಆಶ್ರಯ ಪಡೆದಿದ್ದಾರೆ.

ಕುಶಾಲನಗರ ಪಟ್ಟಣದ ಸಾಯಿ ಲೇಔಟ್ ನಲ್ಲಿ ಪ್ರವಾಹದ ನೀರು ಬಂದ ಕಾರಣ ಮನೆಯೊಳಗೆ ಸಿಲುಕಿದ್ದ 19 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನೇತೃತ್ವದಲ್ಲಿ ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸಿತು.

ಮಡಿಕೇರಿ ಹೋಬಳಿ ಎಸ್ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯ ಮನೆಗಳು ಕಾವೇರಿ ಹೊಳೆಯ ಪ್ರವಾಹಕ್ಕೆ ಸಿಲುಕುವ ಸಂಭವ ಇರುವ ಕಾರಣ ಮುಂಜಾಗೃತಾ ಕ್ರಮವಾಗಿ ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ

ವಿರಾಜಪೇಟೆ ತಾಲೂಕು ಅಮ್ಮತಿ ಹೋಬಳಿ ಹಚ್ಚಿನಾಡು ಗ್ರಾಮದ ಕಾವೇರಿ ಹೊಳೆ ದಡದ ಪಕ್ಕದಲ್ಲಿ ವಾಸವಿರುವ ೧೦ ಮನೆಗಳಿಗೆ ಪ್ರವಾಹ ಭೀತಿ ಇರುವುದರಿಂದ 10 ಕುಟುಂಬದ 44 ಸದಸ್ಯರನ್ನು ಹಚ್ಚಿನಾಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಕುಶಾಲನಗರ ತಾಲ್ಲೂಕು ನೆಲ್ಲಿಹುದಿಕೇರಿ ಗ್ರಾಮದ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ತಹಶೀಲ್ದಾರ್ ಅವರು ಭೇಟಿ ನೀಡಿ ಅಗತ್ಯ ಸೌಲಭ್ಯ ಕಲ್ಪಿಸಿದ್ದಾರೆ. ವಾಲ್ನೂರು ತ್ಯಾಗತ್ತೂರು ಗ್ರಾಮದ ಹೊಳೆ ಪಕ್ಕದ ೮ ಕುಟುಂಬಗಳ 26 ಸದಸ್ಯರನ್ನು ಸ.ಹಿ.ಪ್ರಾ ಶಾಲೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News