ಕೊಡಗು: ಒಂಟಿ ಸಲಗ ದಾಳಿ; ಮೋರಿಯ ಪೈಪ್ ಗೆ ನುಸುಳಿ ಜೀವ ಉಳಿಸಿಕೊಂಡ ವಾಟರ್ ಮ್ಯಾನ್
ಮಡಿಕೇರಿ ಆ.3 : ಒಂಟಿ ಸಲಗವೊಂದು ದಾಳಿ ಮಾಡಿದ ಸಂದರ್ಭ ಸಮಯ ಪ್ರಜ್ಞೆಯಿಂದ ವಾಟರ್ ಮ್ಯಾನೊಬ್ಬರು ಮೋರಿಯ ಪೈಪ್ ಗೆ ನುಸುಳಿ ಜೀವ ಉಳಿಸಿಕೊಂಡ ಘಟನೆ ಸುಂಟಿಕೊಪ್ಪ ಸಮೀಪ ಕೊಡಗರಹಳ್ಳಿಯ 7ನೇ ಹೊಸಕೋಟೆ ಅಂದಗೋವೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ಕೊಡಗರಹಳ್ಳಿ ಗ್ರಾಮಸ್ಥರನ್ನು ನಿತ್ಯ ಕಾಡುತ್ತಿರುವ ಕಾಡಾನೆಯೊಂದು ಇಂದು ಕೂಡ ಬೆಳ್ಳಂಬೆಳಗ್ಗೆ ಅಂದಗೋವೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿದೆ. ಕೊಡಗರಹಳ್ಳಿ ಗ್ರಾ.ಪಂ ನ ವಾಟರ್ ಮ್ಯಾನ್ ಹುಸೇನ್ ಎಂಬವರು ಕರ್ತವ್ಯಕ್ಕೆಂದು ತೆರಳುತ್ತಿದ್ದಾಗ ಆನೆ ದಿಢೀರ್ ದಾಳಿ ಮಾಡಿದೆ. ಸೊಂಡಿಲಿನಿಂದ ತಳ್ಳಿದ ಪರಿಣಾಮ ಮೋರಿಯ ಪೈಪ್ ವೊಂದರ ಬಳಿ ಹುಸೇನ್ ಬಿದ್ದಿದ್ದಾರೆ. ಆನೆ ಮತ್ತೆ ದಾಳಿ ಮಾಡಲು ಧಾವಿಸಿದಾಗ ಸಮಯ ಪ್ರಜ್ಞೆ ಮೆರೆದ ಹುಸೇನ್ ಅವರು ಮೋರಿಯ ಪೈಪ್ ನೊಳಗೆ ನುಸುಳಿಕೊಂಡಿದ್ದಾರೆ. ಆದರೂ ಬಿಡದ ಕಾಡಾನೆ ಪೈನ್ ಮೇಲೆ ದಾಳಿ ಮಾಡಿ ಹಾನಿ ಮಾಡಿದೆ. ಅದೃಷ್ಟವಶಾತ್ ಹುಸೇನ್ ಅವರು ಜೀವ ಉಳಿಸಿಕೊಂಡಿದ್ದಾರೆ. ಕಾಡಾನೆ ತೆರಳಿದ ನಂತರ ಗ್ರಾಮಸ್ಥರು ಗಾಯಾಳು ಹುಸೇನ್ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಸುಂಟಿಕೊಪ್ಪ, ಕೊಡಗರಹಳ್ಳಿ, 7ನೇ ಹೊಸಕೋಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಈ ಒಂಟಿ ಸಲಗ ನಿತ್ಯ ಸಂಚರಿಸಿ ಆತಂಕ ಮೂಡಿಸುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.