ಬಿಜೆಪಿಗೆ ಮತ್ತೆ ಹೋಗುವ ಪ್ರಶ್ನೆಯೇ ಇಲ್ಲ: ಜಗದೀಶ್ ಶೆಟ್ಟರ್

Update: 2023-12-28 17:56 GMT

ಮಡಿಕೇರಿ: ಬಿಜೆಪಿಗೆ ಮತ್ತೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

ಕುಶಾಲನಗರದ ಬಳಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಯಾರೂ ಕರೆದಿಲ್ಲ ಎಂದರು.

ಕೊರೋನ ಸಂದರ್ಭದಲ್ಲಿ ಬಿಎಸ್‌ವೈ ಸರಕಾರದಿಂದ 40,000 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಯತ್ನಾಳ್ ಆರೋಪಕ್ಕೆ ಉತ್ತರಿಸಿದ ಶೆಟ್ಟರ್, ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಇದೀಗ ಎಲ್ಲ ಹೊರಗೆ ಬರುತ್ತಿದೆ. ಈಗಾಗಲೇ ಸಿದ್ದರಾಮಯ್ಯ ಸರಕಾರ ತನಿಖೆಗೆ ಸಮಿತಿ ರಚಿಸಿದ್ದು, ತನಿಖೆ ನಡೆಯುತ್ತಿದೆ. ಯತ್ನಾಳ್ ಮಾಹಿತಿ ತೆಗೆದುಕೊಂಡು ತನಿಖೆ ಮಾಡಿದ್ದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ. ಯತ್ನಾಳ್ ಆರೋಪದ ಬಗ್ಗೆ ದಾಖಲೆ ನೀಡಿದರೆ ತನಿಖೆಗೆ ಅನುಕೂಲವಾಗಲಿದೆ ಎಂದು ಹೇಳಿದರು. ಅದೇ ಸಂದರ್ಭ ಬಿಜೆಪಿಯ 40 ಪರ್ಸೆಂಟ್ ಸರಕಾರದ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು ಎಂದು ಶೆಟ್ಟರ್ ನೆನಪಿಸಿದರು.

ವೀರಶೈವ ಲಿಂಗಾಯತ ಮಹಾ ಅಧಿವೇಶನದಲ್ಲಿ ಧರ್ಮ ನಿರ್ಣಯ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಲಿಂಗಾಯತ ವೀರಶೈವ ಸಮುದಾಯ ಸಂಖ್ಯೆ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ನೆರೆಯ ರಾಜ್ಯಗಳಲ್ಲಿ ಎಷ್ಟಿದ್ದಾರೆ ಅನ್ನುವ ಮಾಹಿತಿ ಸಂಗ್ರಹ ಆಗಬೇಕಾಗಿದೆ. ಈ ಕಾರಣಕ್ಕೆ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಅಂತ ಬರೆಯುವ ನಿರ್ಣಯ ಮಾಡಿದ್ದಾರೆ. ಸಮಾಜದ ಬಂಧುಗಳು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ ಎಂದರು.

ಕನ್ನಡ ನಾಮಫಲಕ ಅಳವಡಿಕೊಳ್ಳುವ ಬಗ್ಗೆ ಕನ್ನಡಪರ ಸಂಘಟನೆಗಳ ಗಲಾಟೆ ವಿಚಾರದ ಬಗ್ಗೆ ಮಾತನಾಡಿದ ಶೆಟ್ಟರ್, ಕನ್ನಡದ ಬಗ್ಗೆ ಜಾಗೃತಿ ಆಗಬೇಕು. ಅದು ಜನರ ಮನಸ್ಸಿನಲ್ಲಿ ಬರಬೇಕು. ಉದ್ಯಮಿಗಳಿಗೆ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮಾಡಬೇಕಾಗಿದೆ. ತಮಿಳುನಾಡಿನ ಜನರು ಈ ವಿಚಾರದಲ್ಲಿ ಈಗಾಗಲೇ ಜಾಗೃತರಾಗಿದ್ದಾರೆ. ಕನ್ನಡ ಪರ ಸಂಘಟನೆ ಸರಕಾರದ ಗಮನಕ್ಕೆ ತಂದು ಜಾಗೃತಿ ಮೂಡಿಸ ಬೇಕಾಗಿದೆ ಕಾನೂನನ್ನು ನೇರವಾಗಿ ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News