ಕೊಡಗಿನಲ್ಲಿ ಮುಂದುವರಿದ ಗಾಳಿ ಸಹಿತ ಮಳೆ: ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ಹಾನಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗಾಳಿ ಸಹಿತ ಮಹಾಮಳೆ ಮುಂದುವರೆದಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ಹಾನಿ ಉಂಟಾಗಿದೆ. ಅಪಾಯದಂಚಿನಲ್ಲಿ ವಾಸಿಸುತ್ತಿರುವವರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯ ಭಾಗಮಂಡಲದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 7 ಇಂಚು ಮಳೆಯಾಗಿದೆ.
ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆ ಗಂಟೆ ಗಂಟೆಗೂ ಬಿರುಸು ಪಡೆದುಕೊಳ್ಳುತ್ತಿದ್ದು, ಹವಾಮಾನ ಇಲಾಖೆ ಜು.17 ರ ಬೆಳಿಗ್ಗೆ 8.30 ಗಂಟೆಯವರೆಗೆ ರೆಡ್ ಅಲರ್ಟ್ ಘೋಷಿಸಿದೆ. ನದಿ, ತೊರೆ, ಹಳ್ಳಕೊಳ್ಳ, ಜಲಾಶಯಗಳಲ್ಲಿನ ನೀರಿನ ಮಟ್ಟ ಏರಿಕೆಯಾಗಿದ್ದು, ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ. ಹಲವು ಭಾಗಗಳಲ್ಲಿ ಅಪಾಯದ ಮುನ್ಸೂಚನೆ ಕಂಡು ಬಂದಿದ್ದು, ಜನರ ಸುರಕ್ಷತೆಗೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ನದಿ ಪಾತ್ರದ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿರುವ 15 ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಕುಶಾಲನಗರ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ.
ಮಳೆ ಹೆಚ್ಚಿರುವ ಹಿನ್ನೆಲೆ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಹಾಗೂ ಭೂಕುಸಿತ ಸಾಧ್ಯತೆ ಇರುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನ ಗುಡ್ಡಗಾಡು ಹಾಗೂ ನದಿ ಪಾತ್ರದಲ್ಲಿ ಮನೆಗಳಲ್ಲಿ ವಾಸಿಸುವವರು ಸ್ವಯಂ ಪ್ರೇರಿತರಾಗಿ ತಾತ್ಕಾಲಿಕವಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಡಿಕೇರಿ ಹೋಬಳಿಯ ಕಡಗದಾಳು ಗ್ರಾಮದ ಮುಕ್ಕಾಟಿರ ಬೊಳ್ಳಪ್ಪ ಎಂಬವರ ವಾಸದ ಮನೆಯು ಭಾರಿ ಗಾಳಿ-ಮಳೆಗೆ ಹೆಚ್ಚಿನ ಹಾನಿಯಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಮಡಿಕೇರಿ ಹೋಬಳಿ ಇಬ್ಬನಿವಳವಾಡಿ ಗ್ರಾಮದ ಮಾಲೆರ ಚೀಯಣ್ಣ ಎಂಬವರ ವಾಸದ ಮನೆಯು ಮಳೆಗೆ ಹಾನಿಯಾಗಿದೆ. ಶ್ರೀಮಂಗಲ ಹೋಬಳಿ ಕೋತೂರು ಗ್ರಾಮದಲ್ಲಿ ತಡ ರಾತ್ರಿ ಸುರಿದ ಮಳೆಯಿಂದಾಗಿ ವಿ.ಎಸ್.ಪ್ರವೀಣ್, ವಿ.ಎಂ.ಮಣಿ, ಹೆಚ್.ಸಿ.ಜಾನಕಿ ಮೂರು ಕುಟುಂಬದ ಮನೆಗಳು ಹಾನಿಯಾಗಿದ್ದು, ಸ್ಥಳಕ್ಕೆ ಶ್ರೀಮಂಗಲ ಹೋಬಳಿ ಉಪ ತಹಶೀಲ್ದಾರರು, ಕಂದಾಯ ಪರಿವೀಕ್ಷಕರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಸೋಮವಾರಪೇಟೆ ತಾಲ್ಲೂಕಿನ ಯಡೂರು ಗ್ರಾಮದ ಪೊನ್ನಮ್ಮ ಚಿಯಣ್ಣ ಎಂಬವರ ಮನೆಯ ಮೇಲ್ಚಾವಣಿಗೆ ಹಾನಿಯಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.
ಸುಂಟಿಕೊಪ್ಪ ಹೋಬಳಿಯ ಉಲುಗುಲಿ ಗ್ರಾಮದ ನಿವಾಸಿಯಾದ ಗಂಗಮ್ಮ ಎಂಬವರ ಮನೆ ಮೇಲೆ ಮರ ಬಿದ್ದು ಮನೆಯ ಶೀಟು ಹಾನಿಯಾಗಿದೆ.
ಸಂಪಾಜೆ ಹೋಬಳಿಯ ಮದೆ ಗ್ರಾ.ಪಂ ವ್ಯಾಪ್ತಿಯ ಕರ್ತೋಜಿ ಬಳಿ ರಾಷ್ಟ್ರೀಯ ಹೆದ್ದಾರಿ ಹಾನಿಗೊಳಗಾಗಿದ್ದು, ರಸ್ತೆಯ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಸುಂಟಿಕೊಪ್ಪ ಚೆಸ್ಕಾಂ ಇಲಾಖೆ ವ್ಯಾಪ್ತಿಯ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ, ಕೆದಕಲ್, ಹೊರೂರು ಹಾಗೂ ಹರದೂರು ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಸೇರಿದಂತೆ ವಿದ್ಯುತ್ ಸಲಕರಣೆಗಳು ಧರೆಗುರುಳಿದೆ.
ಅಪಾಯದಲ್ಲಿ ಶಾಲೆ
ಸಂಪಾಜೆ ಹೋಬಳಿ ವ್ಯಾಪ್ತಿಯ ಕೊಯನಾಡು ಸರಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದ ಬರೆ ಕುಸಿದಿದ್ದು, ಶಾಲೆಯ ನಾಲ್ಕು ಕೋಣೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಕೋಣೆಗಳಲ್ಲಿದ್ದ ಪೀಠೋಪಕರಣಗಳು, ಲೇಖನ ಸಾಮಾಗ್ರಿ ಮತ್ತಿತರ ವಸ್ತುಗಳು ಹಾನಿಗೀಡಾಗಿದೆ. ಸಾರ್ವಜನಿಕರು, ಶಾಲೆಯ ಸಿಬ್ಬಂದಿ, ಅಗ್ನಿಶಾಮಕ ದಳ, ಕಂದಾಯ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ತೆರವು ಕಾರ್ಯಾಚರಣೆಗೆ ಸಹಕರಿಸಿದರು.
ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ರಂಗಧಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ನೋಡಲ್ ಅಧಿಕಾರಿ ಹೇಮಂತ್ ಕುಮಾರ್, ಪಿಡಿಒ ಸ್ಥಳದಲ್ಲಿದ್ದರು.
ಬೇತ್ರಿ, ಬಲಮುರಿ, ಕುಶಾಲನಗರ, ಕರಡಿಗೋಡು ಮತ್ತಿತರ ಭಾಗದಲ್ಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಡಿಕೇರಿ ಸಂಪಾಜೆ ಹೆದ್ದಾರಿ ಭಾಗದಲ್ಲಿ ಬರೆ ಕುಸಿಯುತ್ತಿದ್ದು, ತಕ್ಷಣ ತೆರವು ಕಾರ್ಯಾಚರಣೆಯನ್ನು ಕೂಡ ನಡೆಸಲಾಗುತ್ತಿದೆ.
ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶಗಳು ವಿದ್ಯುತ್ ಕೊರತೆಯನ್ನು ಎದುರಿಸುತ್ತಿದ್ದು, ಚೆಸ್ಕಾಂ ಸಿಬ್ಬಂದಿಗಳು ತುರ್ತು ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಬಂಧಿಸಿದ ಪ್ರಕರಣಗಳು ವರದಿಯಾದಲ್ಲಿ ಮಾಹಿತಿ ನೀಡಲು ವಿಪತ್ತು ನಿರ್ವಹಣಾ ಕೇಂದ್ರವನ್ನು ಈಗಾಗಲೇ ತೆರೆಯಲಾಗಿದೆ.
ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಿ
ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ-08272-221077, 08272-221099, ವಾಟ್ಸಾಪ್ ನಂ.8550001077, ಮಡಿಕೇರಿ ತಾಲ್ಲೂಕು- ವಿಪತ್ತು ನಿರ್ವಹಣಾ ಕೇಂದ್ರ- 08272-228396, ವಿರಾಜಪೇಟೆ ತಾಲ್ಲೂಕು-ವಿಪತ್ತು ನಿರ್ವಹಣಾ ಕೇಂದ್ರ 08274-257328, ಸೋಮವಾರಪೇಟೆ ತಾಲ್ಲೂಕು-ವಿಪತ್ತು ನಿರ್ವಹಣಾ ಕೇಂದ್ರ 08276-282045, ಕುಶಾಲನಗರ ತಾಲ್ಲೂಕು- ವಿಪತ್ತು ನಿರ್ವಹಣಾ ಕೇಂದ್ರ 08276-200198 ಹಾಗೂ ಪೆÇನ್ನಂಪೇಟೆ ತಾಲ್ಲೂಕು- ವಿಪತ್ತು ನಿರ್ವಹಣಾ ಕೇಂದ್ರ 08274-249700 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಮಳೆ ವಿವರ
ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 80.42 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 9.57 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1268.50 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 584.78 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 106.43 ಮಿ.ಮೀ. ಕಳೆದ ವರ್ಷ ಇದೇ ದಿನ 28.98 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1845.64 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1118.09 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 56.30 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1277.55 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 466.11 ಮಿ.ಮೀ. ಮಳೆಯಾಗಿತ್ತು.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 66.34 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 5.89 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1199.03 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 400.33 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 119.55 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 6.20 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1155.56 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 491.01 ಮಿ.ಮೀ. ಮಳೆಯಾಗಿತ್ತು.
ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 53.50 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 5.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 864.70 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 448.35 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ :: ಮಡಿಕೇರಿ ಕಸಬಾ 97, ನಾಪೋಕ್ಲು 70.20, ಸಂಪಾಜೆ 86.50, ಭಾಗಮಂಡಲ 172, ವಿರಾಜಪೇಟೆ 52, ಅಮ್ಮತ್ತಿ 60.60, ಹುದಿಕೇರಿ 90.90, ಶ್ರೀಮಂಗಲ 73.40, ಪೊನ್ನಂಪೇಟೆ 60, ಬಾಳೆಲೆ 41.06, ಸೋಮವಾರಪೇಟೆ ಕಸಬಾ 96.20, ಶನಿವಾರಸಂತೆ 78, ಶಾಂತಳ್ಳಿ 230, ಕೊಡ್ಲಿಪೇಟೆ 74, ಕುಶಾಲನಗರ 38, ಸುಂಟಿಕೊಪ್ಪ 69 ಮಿ.ಮೀ.ಮಳೆಯಾಗಿದೆ.
ಹಾರಂಗಿಯಿಂದ 18750 ಕ್ಯುಸೆಕ್ ನೀರು ನದಿಗೆ
ಹಾರಂಗಿ ಜಲಾಶಯದಿಂದ ನದಿಗೆ 18750 ಕ್ಯುಸೆಕ್ ನೀರು ಬಿಡಲಾಗುತ್ತಿದ್ದು, ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು 50 ಕ್ಯುಸೆಕ್ ಆಗಿತ್ತು. ಇಂದಿನ ನೀರಿನ ಒಳಹರಿವು 12827 ಕ್ಯುಸೆಕ್, ಕಳೆದ ವರ್ಷ ಇದೇ ದಿನ 1162 ಕ್ಯುಸೆಕ್ ಆಗಿತ್ತು.