ಸುಂಟಿಕೊಪ್ಪ: ಆತಂಕ ಮೂಡಿಸಿದ ಸರಣಿ ಕಳ್ಳತನ : 1 ಲಕ್ಷಕ್ಕೂ ಅಧಿಕ ನಗದು ಕದ್ದೊಯ್ದ ಕಳ್ಳರು

Update: 2024-01-28 14:01 GMT

ಮಡಿಕೇರಿ: ಸುಂಟಿಕೊಪ್ಪ ಪಟ್ಟಣದಲ್ಲಿ ಶನಿವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, ಒಂದು ಲಕ್ಷಕ್ಕೂ ಅಧಿಕ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಘಟನೆಯಿಂದ ವರ್ತಕರು ಹಾಗೂ ನಿವಾಸಿಗಳು ಆತಂಕಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಟೀನೇಜ್ ಸೆಲೆಕ್ಷನ್ಸ್ ಬಟ್ಟೆ ಅಂಗಡಿಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು 1 ಲಕ್ಷ ನಗದು, ಕೆಲವು ಬಟ್ಟೆಗಳು ಮತ್ತು ಕನ್ನಡಕಗಳನ್ನು ಕಳ್ಳತನ ಮಾಡಿದ್ದಾರೆ.

ಇದಕ್ಕೂ ಮೊದಲು ಸುರೇಶ್ ಕುಶಾಲಪ್ಪ ಅವರಿಗೆ ಸೇರಿದ ಹೊಗೆ ನಿಯಂತ್ರಣ ಕೇಂದ್ರದಲ್ಲಿ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕದ್ದೊಯ್ದಿದ್ದಾರೆ. ನಂತರ ಬಸ್ ನಿಲ್ದಾಣದಲ್ಲಿರುವ ಪೆಟ್ರೋಲ್ ಬಂಕ್‍ಗೆ ನುಗ್ಗಿ ಹಣ ಸಿಗದ ಇದ್ದಾಗ ಎರಡು ಪ್ಯಾಕೆಟ್ ವಾಹನದ ಆಯಿಲ್ ನ್ನು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿರುವ ಸಿಸಿ ಕ್ಯಾಮರಾದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಇಬ್ಬರು ಮುಸುಕುಧಾರಿಗಳು ಇರುವುದು ಕಂಡು ಬಂದಿದೆ. ಪಕ್ಕದಲ್ಲಿದ್ದ ಹಾಲಿನ ಡೈರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ರೂ.2 ಸಾವಿರವನ್ನು ಕದ್ದೊಯ್ದಿದ್ದಾರೆ.

ರಾಮ ಮೆಡಿಕಲ್ಸ್ ನ ಮಾಲೀಕ ಕೆ.ಪಿ.ಜಗನ್ನಾಥ್ ಅವರ ಹಳೆಯ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಏನೂ ಸಿಗದೆ ಕಾಲ್ಕಿತ್ತಿದ್ದಾರೆ. ಈ ಎಲ್ಲಾ ಕಳ್ಳತನ ಪ್ರಕರಣ ತಡರಾತ್ರಿ 2.15 ರಿಂದ 3.15ರ ಅವಧಿಯಲ್ಲಿ ನಡೆದಿರಬಹುದೆಂದು ಅಂದಾಜಿಸಲಾಗಿದೆ.

ಕಳ್ಳತನ ನಡೆದ ಸ್ಥಳಕ್ಕೆ ಅಪರಾಧ ಪತ್ತೆ ದಳದ ಪೊಲೀಸ್ ಅಧಿಕಾರಿ ಸ್ವಾಮಿ ಹಾಗೂ ಸಿಬ್ಬಂದಿಗಳು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಸುಕುಧಾರಿ ಚೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News