ಕೊಡಗು- ದ.ಕ ಗಡಿಯಲ್ಲಿ ನಕ್ಸಲರ ಸಂಚಾರ | ಶಂಕಿತ ವ್ಯಕ್ತಿಗಳು ನಿಷೇಧಿತ ನಕ್ಸಲ್ ಸಂಘಟನೆಯ ಸದಸ್ಯರು : ಎಸ್‍ಪಿ ಸ್ಪಷ್ಟನೆ

Update: 2024-03-19 14:37 GMT

ಮಡಿಕೇರಿ: ಕೊಡಗು- ದಕ್ಷಿಣ ಕನ್ನಡ ಜಿಲ್ಲೆಯ ಕೂಜಿಮಲೆ ಎಸ್ಟೇಟ್ ಅಂಗಡಿಗೆ ಬಂದು ದಿನಸಿ ಪದಾರ್ಥ ತೆಗೆದುಕೊಂಡು ಹೋಗಿರುವ ಶಂಕಿತ ವ್ಯಕ್ತಿಗಳು ನಿಷೇಧಿತ ನಕ್ಸಲ್ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಎಸ್.ಪಿ, ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಶಸ್ತ್ರ ಸಜ್ಜಿತರಾಗಿ ಮಾ.17ರ ಸಂಜೆ ವೇಳೆ ಕೂಜಿಮಲೆ ರಬ್ಬರ್ ಎಸ್ಟೇಟ್‍ನ ಅಂಗಡಿಗೆ ಆಗಮಿಸಿ 25 ಕೆ.ಜಿ ಅಕ್ಕಿ ಸಹಿತ ಇತರ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಈ ವೇಳೆ ಕನ್ನಡ ಭಾಷೆಯಲ್ಲಿ ತಮ್ಮನ್ನು ನಕ್ಸಲ್ ಹೋರಾಟಗಾರರು ಎಂದೇ ಪರಿಚಯಿಸಿಕೊಂಡಿದ್ದಲ್ಲದೇ, ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ತಿಳಿಸಿದ್ದಾರೆ. ತನಿಖೆ ಸಂದರ್ಭ ಅಂಗಡಿ ಮಾಲೀಕರಿಗೆ ಕೆಲವು ಫೋಟೋಗಳನ್ನು ತೋರಿಸಿದಾಗ ಓರ್ವ ವ್ಯಕ್ತಿ ನಕ್ಸಲ್ ಮುಖಂಡ ವಿಕ್ರಂ ಗೌಡನನ್ನು ಹೋಲುತ್ತಿರುವುದಾಗಿ ಹೇಳಿದ್ದಾರೆ. ಇನ್ನುಳಿದ ಮೂವರ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು.

ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.

ತೀವ್ರ ಶೋಧ 

ಶಸ್ತ್ರ ಸಜ್ಜಿತ ಶಂಕಿತ ನಕ್ಸಲರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲ್ ನಿಗ್ರಹ ದಳದ ಕಮಾಂಡೋಗಳ ಸಹಿತ ಶ್ವಾನದಳ ಹಾಗೂ ಡ್ರೋಣ್ ಕ್ಯಾಮರಾಗಳನ್ನು ಕೂಡ ಬಳಸಲಾಗುತ್ತಿದೆ. ಕೂಜಿಮಲೆ ಅರಣ್ಯ ಪ್ರದೇಶ ದಟ್ಟ ಕಾಡಿನ ಸಹಿತ ತೀವ್ರ ಕಣಿವೆಗಳಿಂದ ಕೂಡಿರುವ ಹಿನ್ನೆಲೆಯಲ್ಲಿ ಈ ರೀತಿಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲ್ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಜಿಲ್ಲೆಗೆ ಆಗಮಿಸಿ ಕೂಂಬಿಂಗ್ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಕೂಜಿಮಲೆ ರಬ್ಬರ್ ಎಸ್ಟೇಟ್‍ನ ಅಂಗಡಿಗೆ ಬಂದಿದ್ದ ನಕ್ಸಲರ ಕುರಿತು ನೆರೆ ಜಿಲ್ಲೆಗಳು ಮತ್ತು ಕೇರಳ ರಾಜ್ಯದ ಗುಪ್ತಚರ ಇಲಾಖೆಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಹಿಂದಿನ ಪ್ರಕರಣಗಳನ್ನು ಗಮನಿಸಲಾಗುತ್ತಿದ್ದು, ಜಿಲ್ಲಾ ಗುಪ್ತದಳ, ರಾಜ್ಯ ಗುಪ್ತ ದಳ, ರಾಜ್ಯ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತನಿಖೆಯ ಭಾಗವಾಗಿದ್ದಾರೆ ಎಂದು ಎಸ್‍ಪಿ ಮಾಹಿತಿ ನೀಡಿದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News