ಮರಿಯೊಂದಿಗೆ ಹುಲಿ ಸಂಚಾರ : ಕೊಡಗಿನ ವಿವಿಧೆಡೆ ಹುಲಿ ಆತಂಕ

Update: 2024-01-16 16:16 GMT

ಮಡಿಕೇರಿ: ಕಳೆದ ಎರಡು ದಶಕಗಳಿಂದ ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಹುಲಿ ದಾಳಿಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕದ ವಾತಾವರಣವಿದೆ.

ದಕ್ಷಿಣ ಕೊಡಗಿನ ನಾಗರಹೊಳೆ ಅಂಚಿನ ಗ್ರಾಮೀಣ ಭಾಗಗಳಲ್ಲಿ ಕಂಡು ಬರುತ್ತಿದ್ದ ಹುಲಿ ಹಾವಳಿ, ಈಗ ಜಿಲ್ಲೆಯ ವಿವಿಧೆಡೆಗೆ ವ್ಯಾಪಿಸಿದೆ. ಕಾಡಾನೆಯ ಉಪಟಳದಿಂದ ಕೃಷಿ ಫಸಲನ್ನು ಕಳೆದುಕೊಂಡು ಕಂಗಾಲಾಗಿರುವ ಜಿಲ್ಲೆಯ ಕೃಷಿಕ ಸಮೂಹ, ಹುಲಿ ದಾಳಿಯಿಂದ ಜಾನುವಾರುಗಳನ್ನು ಕಳೆದುಕೊಳ್ಳುತ್ತಿದೆ.

ಮಡಿಕೇರಿ ತಾಲೂಕಿನ ಕುಂಜಿಲ ಗ್ರಾಮದ ಕೈಬುಲಿರ ಕುಟುಂಬದ ತೋಟದಲ್ಲಿ ಅರೆ ಬರೆಯಾಗಿ ತಿಂದ ಕಾಡು ಹಂದಿಯ ದೇಹದ ಭಾಗಗಳು ಎರಡು ದಿನಗಳ ಹಿಂದೆ ಕಂಡು ಬಂದಿದೆ. ಇದು ಹುಲಿ ದಾಳಿಯಿಂದಲೆ ನಡೆದಿರಬಹುದು ಎನ್ನುವ ಆತಂಕ ಸ್ಥಳೀಯರಲ್ಲಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಇದರ ನಡುವೆಯೇ ನೆಲಜಿ ಮತ್ತು ಕುಂಜಿಲ ಗ್ರಾಮದ ಗಡಿಯಲ್ಲಿರುವ ಅಚ್ಚಾಂಡಿರ ಹಾಗೂ ಕಲಿಯಾಟಂಡ ಕುಟುಂಬಸ್ಥರ ತೋಟದ ಮಧ್ಯೆ ಬರುವ ಕೊಲ್ಲಿಯ ಬಳಿ ಇಂದು ಬೆಳಿಗ್ಗೆ ಹುಲಿಯೊಂದು ಕಾರ್ಮಿಕರ ಕಣ್ಣಿಗೆ ಬಿದ್ದಿರುವುದಾಗಿ ತಿಳಿದು ಬಂದಿದೆ. ಹುಲಿಯೊಂದಿಗೆ ಮರಿ ಹುಲಿ ಇರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದ್ದು, ಅಲ್ಲಲ್ಲಿ ಹೆಜ್ಜೆ ಗುರುತುಗಳು ಗೋಚರಿಸಿದೆ.

ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಹುಲಿಯ ಚಲನವಲನದ ಪತ್ತೆಗೆ ಸಿಸಿ ಕ್ಯಾಮೆರ ಅಳವಡಿಸುವ ಭರವಸೆ ನೀಡಿದ್ದಾರೆ. ವನ್ಯಜೀವಿಗಳ ಉಪಟಳದ ಸರದಿ ಬೆಳೆಯುತ್ತಿದ್ದು, ಜಿಲ್ಲೆಯ ಯಾವೊಂದು ಭಾಗವು ವನ್ಯಜೀವಿಗಳ ಹಾವಳಿಯಿಂದ ಮುಕ್ತವಾಗಿಲ್ಲ. ಅರಣ್ಯದ ಅಂಚಿನ ಭಾಗಗಳಲ್ಲಿ ಕಾಡಾನೆ, ಹುಲಿ ಹಾವಳಿ ಇದ್ದರೆ, ಉಳಿದ ಭಾಗಗಳಲ್ಲಿ ಕಾಡುಹಂದಿ, ಮಂಗಗಳ ಉಪಟಳ ಮಿತಿ ಮೀರಿದೆ. ಭತ್ತದ ಫಸಲು ಕೊಯ್ಲಿನ ಈ ಅವಧಿಯಲ್ಲಿ ಕಾಡುಹಂದಿಗಳ ಉಪಟಳ ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಮಂಗಗಳು ಕಾಫಿ ತೋಟಗಳಲ್ಲು ಬೀಡು ಬಿಟ್ಟು ಹಣ್ಣು ಕಾಫಿಯನ್ನು ನಾಶ ಮಾಡಿ ಬೆಳೆಗಾರರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

ಕಾಡಾನೆ, ಹುಲಿ ಹಾವಳಿ ಸೇರಿದಂತೆ ವನ್ಯಮೃಗಗಳ ಹಾವಳಿಗೆ ಶಾಶ್ವತ ಪರಿಹಾರ ಎನ್ನುವುದು ಕೇವಲ ಹೇಳಿಕೆಗಳಲ್ಲಿ, ಸರ್ಕಾರದ ಆದೇಶಗಳಿಗಷ್ಟೇ ಸೀಮಿತವಾಗಿದೆ. ಕಾಡಾನೆ ಹಾವಳಿಗೆ ರೈಲ್ವೆ ಹಳಿ ಬೇಲಿ, ಕಂದಕಗಳ ನಿರ್ಮಾಣ ಅಲ್ಲಲ್ಲಿ ನಡೆಯುತ್ತಿದೆಯಾದರು, ಅದು ಪೂರ್ಣವಾಗಿಲ್ಲ ಮತ್ತು ಫಲಪ್ರದವಾಗಿಲ್ಲ. ವನ್ಯಜೀವಿಗಳ ಉಪಟಳದ ವಿರುದ್ಧ ನಡೆಯುತ್ತಿರುವ ರೈತಪರ ಹೋರಾಟಗಳು ಅರಣ್ಯರೋಧನವಾಗಿದೆ.

ಸರ್ಕಾರ ಗಂಭೀರವಾಗಿ ಪರಿಗಣಿಸಲಿ

ಕೊಡಗು ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಕಾಡುಪ್ರಾಣಿಗಳ ಹಾವಳಿ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಬೆಳೆನಷ್ಟ ಮಾತ್ರವಲ್ಲದೆ ಜೀವಹಾನಿಯಾಗಿದ್ದರೂ ಸರ್ಕಾರಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬೆಳೆಗಾರರು ಹಾಗೂ ಕಾರ್ಮಿಕರು ಕಷ್ಟ, ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಕಾರ್ಮಿಕರ ಮೇಲೆ ನಿರಂತರವಾಗಿ ಕಾಡಾನೆಗಳ ದಾಳಿಯಾಗುತ್ತಿದೆ. ಪರಿಸ್ಥಿತಿ ಕೈಮೀರುವ ಮೊದಲು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಸಚಿವರುಗಳು ಉನ್ನತ ಮಟ್ಟದ ಸಭೆ ನಡೆಸಿ ಕೃಷಿಕರ ಮತ್ತು ಕಾರ್ಮಿಕ ವರ್ಗದ ಅಭಿಪ್ರಾಯ ಸಂಗ್ರಹಿಸಿ ಪರಿಹಾರ ಸೂಚಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News