ಕೊಡಗಿನಲ್ಲಿ ಅಕಾಲಿಕ ಮಳೆ
ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆಯಾಗುತ್ತಿದೆ. ಬಹುತೇಕ ಕಡೆ ಸಾಧಾರಣ ಮಳೆ ನಿರಂತರವಾಗಿ ಸುರಿಯುತ್ತಿದೆ. ಕಾಫಿ ಮತ್ತು ಭತ್ತದ ಕೃಷಿಕರು ಬೆಳೆ ಹಾನಿಯ ಆತಂಕ ಎದುರಿಸುತ್ತಿದ್ದಾರೆ.
ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ಹಲವೆಡೆ ಮಳೆಯಾಗಿದೆ. ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರದಲ್ಲಿ ಮಳೆ, ಮೈಕೊರೆಯುವ ಚಳಿ ಮತ್ತು ಮಂಜು ಮುಸುಕಿದ ವಾತಾವರಣವಿದೆ.
ಜಿಲ್ಲೆಯಲ್ಲಿ ಕಾಫಿ ಫಸಲು ಹಣ್ಣಾಗಿದ್ದು, ಬಹುತೇಕ ಕಡೆಗಳಲ್ಲಿ ಕೊಯ್ಲು ಕಾರ್ಯ ಆರಂಭಗೊಂಡಿದೆ. ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಕಾಫಿಯ ಗುಣಮಟ್ಟ ಕುಸಿಯುವ ಭೀತಿ ಎದುರಾಗಿದೆ. ಕೊಯ್ಲು ಮಾಡದೆ ಇರುವ ಕಾಫಿ ಕೊಳೆತು ಉದುರಲಿವೆ. ಮಾತ್ರವಲ್ಲದೆ ಈಗಾಗಲೇ ಕೊಯ್ಲು ಮಾಡಿರುವ ಕಾಫಿಯನ್ನು ಕಣಗಳಲ್ಲಿ ಒಣಗಿಸುವುದೇ ಸವಾಲಾಗಿ ಪರಿಣಮಿಸಿದೆ.
ಮತ್ತೊಂದೆಡೆ ಭತ್ತದ ಫಸಲು ಕೂಡ ಕಟಾವಿಗೆ ಬಂದಿದ್ದು, ಬೆಳೆ ನಷ್ಟವಾಗುವ ಆತಂಕ ರೈತರಲ್ಲಿದೆ. ಕಟಾವು ಮಾಡಲಾಗಿರುವ ಭತ್ತದ ಫಸಲನ್ನು ಗದ್ದೆಯಲ್ಲೇ ಒಣಗಲು ಬಿಡಲಾಗಿದ್ದು, ಮಳೆ ನೀರು ಮತ್ತು ಮಂಜಿನಿಂದಾಗಿ ಹಾನಿಯಾಗುವ ಸಂಭವ ಇದೆ.